ಬೆಂಗಳೂರು : ಹೆಂಡತಿ ಮೊಬೈಲ್ ನಂಬರ್ ಕೇಳಿದ್ದಕ್ಕೆ ಸಿಟ್ಟಾದ ವ್ಯಕ್ತಿಯೋರ್ವ ಜಾತಿ ಗಣತಿದಾರರ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನನ್ನ ಅನುಮತಿ ಇಲ್ಲದೇ ಪತ್ನಿಯಿಂದ ಮೊಬೈಲ್ ಸಂಖ್ಯೆ ಪಡೆದಿದ್ದಾರೆ ಎಂದು ಆರೋಪಿಸಿ ಗಣತಿದಾರರ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ್ದಾನೆ. ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಎಂ ಅಭಿಷೇಕ್ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು FIR ದಾಖಲಿಸಿದ್ದಾರೆ.
ಸ್ಟೀಫನ್ ಮನೆಗೆ ಗಣತಿದಾರರಾದ ಅಭಿಷೇಕ್ ಹಾಗೂ ಪೆದ್ದಯ್ಯ ತೆರಳಿ ಸಮೀಕ್ಷೆ ನಡೆಸಿದ್ದರು. ಮರು ದಿನ ಅದೇ ಪ್ರದೇಶದಲ್ಲಿ ಗಣತಿ ನಡೆಸುತ್ತಿದ್ದ ಅಭಿಷೇಕ್ ಹಾಗೂ ಪೆದ್ದಯ್ಯ ಮೇಲೆ ಸ್ಟೀಫನ್ ಹಲ್ಲೆ ನಡೆಸಿದ್ದಾನೆ. ನಾನು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಬಂದು ಹೇಗೆ ನನ್ನ ಹೆಂಡತಿ ಮೊಬೈಲ್ ನಂಬರ್ ಕೇಳಿದ್ರಿ..ಹೇಗೆ ಅವರ ವಿವರ ಪಡೆದಿದ್ದೀರಿ ಎಂದು ಪ್ರಶ್ನಿಸಿ ಆತನ ಸ್ನೇಹಿತರ ಜೊತೆ ಸೇರಿಕೊಂಡು ಸ್ಟೀಫನ್ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
