ಯಾದಗಿರಿ: ಯಾದಗಿರಿ ನಗರದ ಹಳೆ ಜಿಲ್ಲಾ ನ್ಯಾಯಾಲಯದ ಸಮೀಪ ಲವ್ ಮ್ಯಾರೇಜ್ ವಿಷಯಕ್ಕೆ ನ್ಯಾಯ ಪಂಚಾಯಿತಿ ನಡೆಯುವಾಗ ನಾಲ್ವರಿಗೆ ಚಾಕುವಿನಿಂದ ಇರಿಯಲಾಗಿದೆ.
ಯಾದಗಿರಿ ತಾಲೂಕಿನ ನಾಗಲಾಪುರ ಗ್ರಾಮದ ನಿರ್ಮಲ್ ನಾಲ್ವರಿಗೆ ಚಾಕುವಿನಿಂದ ಇರಿದಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಹೊನಗೇರಾ ಗ್ರಾಮದ ವೀರಪ್ಪ, ಮಲ್ಲಪ್ಪ, ಮಲ್ಲೇಶ್, ಮತ್ತೊಬ್ಬ ಮಲ್ಲಪ್ಪ ಎಂಬುವರಿಗೆ ಚಾಕುವಿನಿಂದ ಇರಿಯಲಾಗಿದೆ. ಇವರಲ್ಲಿ ವೀರಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಟ್ಟೆ ಹಾಗೂ ಕೈಗೆ ತೀವ್ರ ಗಾಯವಾಗಿದೆ. ಗಾಯಾಳುಗಳನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಟುಂಬದವರ ಜೊತೆಗೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಶೋಭಾ ಮತ್ತು ಮಲ್ಲಾರೆಡ್ಡಿ ಪರಿಚಯವಾಗಿ ಪರಸ್ಪರ ಪ್ರೀತಿಸಿದ್ದಾರೆ. ಕುಟುಂಬದವರಿಗೆ ಗೊತ್ತಿಲ್ಲದೆ ಬೆಂಗಳೂರಿನ ದೇವಾಲಯವೊಂದರಲ್ಲಿ ಮದುವೆಯಾಗಿದ್ದಾರೆ. ನಂತರ ಕುಟುಂಬದವರಿಗೆ ವಿಷಯ ಗೊತ್ತಾಗಿ ಹಿರಿಯರ ಸಮ್ಮುಖದಲ್ಲಿ ಮತ್ತೊಮ್ಮೆ ಮದುವೆ ಮಾಡಲು ನ್ಯಾಯ ಪಂಚಾಯಿತಿ ನಡೆಸಲಾಗಿದೆ.
ಈ ವೇಳೆ ಮಾತಿಗೆ ಮಾತು ಬೆಳೆದು ಚಾಕುವಿನಿಂದ ಇರಿಯಲಾಗಿದೆ. ನಿರ್ಮಲ್ ಮತ್ತು ಮಲ್ಲಾ ರೆಡ್ಡಿ ಸಂಬಂಧಿಕರಾಗಿದ್ದು, ನಿರ್ಮಲ್ ಮದುವೆ ಮಾಡಿಸಿದ್ದಾನೆ ಎಂದು ಯುವತಿ ಕುಟುಂಬದವರು ಜಗಳವಾಡಿದ್ದಾರೆ. ಜಗಳದ ವೇಳೆ ಕೈ ಕೈ ಮಿಲಾಯಿಸಿದ್ದು, ನಾಲ್ವರಿಗೆ ಮೇಲೆ ನಿರ್ಮಲ್ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.