ಬೆಳಗಾವಿ: ನವೆಂಬರ್ ನಲ್ಲಿ ರಾಜಕೀಯ ಕ್ರಾಂತಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರೈಸುತ್ತಿರುವ ಹೊತಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯ ಕಪ್ಪಲಗುದ್ದಿಯಲ್ಲಿ ಕನಕದಾಸರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಯತೀಂದ್ರ ಸಿದ್ದರಾಮಯ್ಯ, ನಮ್ಮ ತಂದೆ ರಾಜಕೀಯ ಕೊನೆಗಾಲದಲ್ಲಿ ಇದ್ದಾರೆ. ವೈಚಾರಿಕವಾಗಿ ಪ್ರಗತಿಪರ ಸಿದ್ಧಾಂತ ಇರುವ ನಾಯಕರು ಬೇಕು. ಮಾರ್ಗದರ್ಶನ ಮಾಡಿ ನೇತೃತ್ವ ವಹಿಸಬೇಕು ಎಂದು ಹೇಳಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಆ ಜವಾಬ್ದಾರಿ ನಿಭಾಯಿಸುತ್ತಾರೆ. ಕಾಂಗ್ರೆಸ್ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರುವ ಎಲ್ಲಾ ಕಾಂಗ್ರೆಸ್ ನಾಯಕರಿಗೆ ಮಾದರಿಯಾಗಿ ಅವರು ಮುನ್ನಡೆಯುತ್ತಾರೆ ಎಂಬ ನಂಬಿಕೆ ಇದೆ. ಪಕ್ಷ ಬದ್ಧತೆ ಇರುವಂತ ನಾಯಕರು ಜಾರಕಿಹೊಳಿ ಎಂದು ಹೇಳುವ ಮೂಲಕ ಸತೀಶ್ ಜಾರಕಿಹೊಳಿ ಅವರನ್ನು ಶ್ಲಾಘಿಸಿದ್ದಾರೆ. ಈ ಮೂಲಕ ಸತೀಶ್ ಜಾರಕಿಹೊಳಿ ಮುಂದಿನ ಉತ್ತರಾಧಿಕಾರಿಯಾಗುತ್ತಾರಾ? ಎಂಬ ಚರ್ಚೆ ಆರಂಭವಾಗಿದೆ. ಸಿಎಂ ಬದಲಾವಣೆ ಚರ್ಚೆ ಸಂದರ್ಭದಲ್ಲೇ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.