BIG UPDATE : ಬೆಂಗಳೂರಿನಲ್ಲಿ ಪಟಾಕಿ ಅವಘಡ  ಕೇಸ್ : ಗಾಯಾಳುಗಳ ಸಂಖ್ಯೆ 145 ಕ್ಕೆ ಏರಿಕೆ

ಬೆಂಗಳೂರು: ಎಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಸಡಗರ-ಸಂಭ್ರಮ ಮನೆ ಮಾಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪಟಾಕಿ ಶಬ್ಧಗಳು ಜೋರಾಗಿವೆ. ದೀಪಾವಳಿ ಪಟಾಕಿ ಅವಘಡದಿಂದಾಗಿ 145 ಜನರು ಗಾಯಗೊಂಡಿರುವ ಘಟನೆ ನಡೆದಿದೆ.

ಪಟಾಕಿ ಹೊಡೆಯುವವರು ಮಾತ್ರವಲ್ಲ ಪಟಾಕಿ ಸಿಡಿಸುವುದನ್ನು ನೋಡಲು ಹೋಗಿದ್ದ ಮಕ್ಕಳು, ಯುವಕರು ಕೂಡ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ 13 ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಈವರೆಗೆ ಬೆಂಗಳೂರಿನಲ್ಲಿ ಪಟಾಕಿ ಸಿಡಿತಕ್ಕೆ 145 ಜನರು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ನಾರಾಯಣ ನೇತ್ರಾಲಯದಲ್ಲಿ ಬರೋಬ್ಬರಿ 51 ಮಂದಿ ಚಿಕಿತ್ಸೆ ಪಡೆದಿದ್ದಾರೆ.

ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 13 ಜನರು ದಾಖಲಾಗಿದ್ದಾರೆ. ಪಟಾಕಿ ಸಿಡಿದು 20 ವರ್ಷದ ಓರ್ವ ಯುವಕ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ. ಬೆಂಗಳೂರಿನ ಅಕ್ಕಿಪೇಟೆ ನಿವಾಸಿ ಯುವಕನ ಕಣ್ಣಿನ ದೃಷ್ಟಿ ಸಂಪೂರ್ಣ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ನಗರದಾದ್ಯಂತ ಇರುವ ಆಸ್ಪತ್ರೆಗಳು ತುರ್ತು ಚಿಕಿತ್ಸೆ ನೀಡಲು ಸಿದ್ಧವಾಗಿವೆ. ವಿಕ್ಟೋರಿಯಾ ಆಸ್ಪತ್ರೆಯ ಮಹಾಬೋಧಿ ಬರ್ನ್ಸ್ ಸೆಂಟರ್ ಮತ್ತು ಮಿಂಟೋ ಕಣ್ಣಿನ ಆಸ್ಪತ್ರೆ ಹಬ್ಬದ ಸಮಯದಲ್ಲಿ ಪಟಾಕಿಯಿಂದ ಗಾಯಗೊಂಡವರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ವಿಶೇಷ ತುರ್ತು ವ್ಯವಸ್ಥೆಗಳನ್ನು ಮಾಡಿಕೊಂಡಿವೆ.

ಪಟಾಕಿ, ಬೆಂಕಿಯಿಂದ ಸುಟ್ಟ ಗಾಯಗಳನ್ನು ನಿಭಾಯಿಸಲು ವಿಕ್ಟೋರಿಯಾ ಆಸ್ಪತ್ರೆಯು ವೈದ್ಯರು ಮತ್ತು ಶುಶ್ರೂಷಕ ಸಿಬ್ಬಂದಿಯ ನಿರಂತರ ಕರ್ತವ್ಯದೊಂದಿಗೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದಾರೆ. ಆಸ್ಪತ್ರೆಯ ಮಹಾಬೋಧಿ ಬರ್ನ್ಸ್ ಸೆಂಟರ್ ಅಗತ್ಯ ಔಷಧಿಗಳನ್ನು ಸಂಗ್ರಹಿಸಿದೆ. ಮತ್ತು ಗಂಭೀರ ಪ್ರಕರಣಗಳಿಗಾಗಿ ತನ್ನ ತೀವ್ರ ನಿಗಾ ಘಟಕಗಳನ್ನು ವೆಂಟಿಲೇಟರ್ ಬೆಂಬಲದೊಂದಿಗೆ ಸಜ್ಜುಗೊಳಿಸಿದೆ.

ಮಿಂಟೋ ಕಣ್ಣಿನ ಆಸ್ಪತ್ರೆಯು 25 ಹಾಸಿಗೆಗಳನ್ನು ಮೀಸಲಿಟ್ಟಿದೆ. ಪುರುಷರು, ಮಹಿಳೆಯರಿಗೆ ತಲಾ 10 ಮತ್ತು ಮಕ್ಕಳಿಗೆ 5 ಬೆಡ್ಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಮೀಸಲಿಡಲಾಗಿದೆ. ಜೊತೆಗೆ ಹಬ್ಬದ ವೇಳೆ ವಿಶೇಷ ವೈದ್ಯಕೀಯ ತಂಡವು ಸೇವೆಗೆ ಸಜ್ಜಾಗಿದೆ.

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪಟಾಕಿಗಳನ್ನು ಹಿಡಿಯಲು ಅವಕಾಶ ನೀಡಬೇಡಿ ಎಂದು ಪೋಷಕರಿಗೆ ವೈದ್ಯರು ಮನವಿ ಮಾಡಿದ್ದಾರೆ.ಮಕ್ಕಳು ಪಟಾಕಿ ಸಿಡಿಸುವಾಗ ಪೋಷಕರು ಎಚ್ಚರದಿಂದಿರಬೇಕು ಮತ್ತು ಜೊತೆಯಲ್ಲಿ ಇರಬೇಕು. ಸುಲಭವಾಗಿ ಬೆಂಕಿ ಹಿಡಿಯದ ಹತ್ತಿ ಬಟ್ಟೆಗಳನ್ನು ಧರಿಸಿ ಮತ್ತು ಒಂದು ಬಕೆಟ್ ನೀರನ್ನು ಹತ್ತಿರ ಇಟ್ಟುಕೊಳ್ಳಿ ಎಂದು ಮಿಂಟೋ ಆಸ್ಪತ್ರೆಯ ನರ್ಸಿಂಗ್ ಅಧೀಕ್ಷಕಿ ಸಲಹೆ ನೀಡಿದ್ದಾರೆ.

ತುರ್ತು ಸಹಾಯವಾಣಿಗಳು

ಮಿಂಟೋ ಕಣ್ಣಿನ ಆಸ್ಪತ್ರೆ: 080-26707176 / 26706221
ವಿಕ್ಟೋರಿಯಾ ಆಸ್ಪತ್ರೆ: 080-2670 1150 EXT 201-202

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read