ಬೆಂಗಳೂರು: ಅನುದಾನಿತ ಮತ್ತು ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕಾಗಿ ಅಗ್ನಿ ಸುರಕ್ಷತೆ, ಕಟ್ಟಡ ಸುರಕ್ಷತೆ, ಭೂ ಪರಿವರ್ತನೆ, 30 ವರ್ಷಗಳ ನೋಂದಣಿ ಪರಿಷ್ಕರಣೆ ಮತ್ತಿತರೆ ಅಂಶಗಳನ್ನು ಸೇರ್ಪಡೆ ಮಾಡಿರುವ ಬಗ್ಗೆ ಖಾಸಗಿ ಶಾಲೆಗಳು ಒಕ್ಕೂಟ(ಕ್ಯಾಮ್ಸ್) ವಿರೋಧ ವ್ಯಕ್ತಪಡಿಸಿದೆ.
ಈ ನಿಯಮಗಳನ್ನು ಹಳೆಯ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸಬಾರದು ಎಂದು ಹೇಳಲಾಗಿದೆ. ಶಿಕ್ಷಣ ಇಲಾಖೆಯ ಅಗ್ನಿ ಮತ್ತು ಸುರಕ್ಷತೆ ಆದೇಶವನ್ನು ರದ್ದು ಮಾಡಲಾಗಿದ್ದು, ಹೈಕೋರ್ಟ್ ಸೂಚನೆ ಉಲ್ಲಂಘಿಸಿ ಹೊಸ ಆದೇಶ ಹೊರಡಿಸಲಾಗಿದೆ. ಸರ್ಕಾರದ ಈ ಆದೇಶ ವಿವಿಧ ಇಲಾಖೆಗಳಿಗೆ ಹಣ ಸುಲಿಗೆ ಮಾಡಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಖಾಸಗಿ ಶಾಲೆಗಳ ಒಕ್ಕೂಟ ಪತ್ರ ಬರೆದಿದೆ.
ಕಳೆದ ವರ್ಷ ಸಲ್ಲಿಸಿದ ಪ್ರಮಾಣ ಪತ್ರಗಳನ್ನು ಪರಿಗಣಿಸಿ ಷರತ್ತುಬದ್ಧ ಮುಚ್ಚಳಿಕೆ ಪಡೆದು ಮಾನ್ಯತೆ ನವೀಕರಣ ಮಾಡಿಕೊಡಬೇಕು ಎಂದು ಸಂಘದ ಗೌರವಾಧ್ಯಕ್ಷ ಪುಟ್ಟಣ್ಣ ಮತ್ತು ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರು ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.