ನ್ಯೂಯಾರ್ಕ್: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಟಿಕ್ಕಿಗಳು, ಅಮೆರಿಕದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಚಾಲ್ತಿಯಲ್ಲಿರುವ ಹೆಚ್ -1 ಬಿ ವೀಸಾಗಳಿಗೆ ಹೆಚ್ಚುವರಿ ಶುಲ್ಕವಿಲ್ಲವೆಂದು ಘೋಷಣೆ ಮಾಡಿದ್ದಾರೆ.
ದುಬಾರಿ ಶುಲ್ಕದಿಂದ ವಿನಾಯಿತಿ ನೀಡಲಾಗಿದ್ದು, ಭಾರತೀಯ ಟಿಕ್ಕಿಗಳಿಗೆ, ವಿದ್ಯಾರ್ಥಿಗಳೀಗ ನಿರಾಳರಾಗಿದ್ದಾರೆ. ಭಾರತೀಯರು ಸೇರಿದಂತೆ ಎಲ್ಲಾ ವಲಸಿಗರಿಗೆ ಹೆಚ್ -1 ಬಿ ವೀಸಾ ಶುಲ್ಕವನ್ನು ಒಂದು ಲಕ್ಷ ಡಾಲರ್ ಗೆ(ಸುಮಾರು 87 ಲಕ್ಷ ರೂಪಾಯಿಗೆ) ಹೆಚ್ಚಳ ಮಾಡುವ ಮೂಲಕ ಶಾಕ್ ನೀಡಿದ್ದ ಡೊನಾಲ್ಟ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ನಿಯಮವನ್ನು ಕೊಂಚ ಸಡಿಲಿಸುವ ಮೂಲಕ ರಿಲೀಫ್ ನೀಡಿದೆ.
ವೀಸಾದಲ್ಲಿ ಸ್ಥಾನಮಾನ ಬದಲಾವಣೆ ಅಥವಾ ವಾಸ್ತವ ಬದಲಾವಣೆ ಮಾಡುವವರಿಗೆ ಒಂದು ಲಕ್ಷ ಡಾಲರ್ ಹೆಚ್ -1 ಬಿ ವೀಸಾ ಶುಲ್ಕ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇದರಿಂದಾಗಿ ಅಮೆರಿಕದಲ್ಲಿ ಈಗಾಗಲೇ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು, ಹಾಲಿ ವೀಸಾ ಪಡೆದ ಟೆಕ್ಕಿಗಳು ನಿಟ್ಟುಸಿರು ಬಿಡುವಂತಾಗಿದೆ.
ಈ ಹಿಂದೆ ನೀಡಲಾದ ವೀಸಾಗಳಿಗೆ ಅಥವಾ ಹಾಲಿ ಚಾಲ್ತಿಯಲ್ಲಿರುವ ಹೆಚ್ -1 ಬಿ ವೀಸಾಗಳಿಗೆ ಅಥವಾ ಕಳೆದ ಸೆ. 21ರ ಮಧ್ಯರಾತ್ರಿಗೆ ಮೊದಲು ಅರ್ಜಿ ಸಲ್ಲಿಸಿದವರಿಗೆ ಹೊಸ ಶುಲ್ಕ ಅನ್ವಯವಾಗುವುದಿಲ್ಲ. ಈಗಾಗಲೇ ಅಮೆರಿಕದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಕೂಡ ಇದರಿಂದ ಹೊರಗಿಡಲಾಗಿದೆ. ಹೊಸ ವೀಸಾ ಅರ್ಜಿಗಳನ್ನು ಸಲ್ಲಿಸುವವರಿಗೆ ಮಾತ್ರ ಅನ್ವಯವಾಗಲಿದೆ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆ ಇಲಾಖೆ ಮಾಹಿತಿ ನೀಡಿದೆ.
ವಿವಿಧ ಕಂಪನಿಗಳಿಂದ ಅಮೆರಿಕಕ್ಕೆ ವರ್ಗಾವಣೆಯಾಗುವ ವಲಸೆಯೇತರ ನೌಕರರಿಗೆ ಎಲ್-1 ವೀಸಾ ನೀಡಲಾಗುತ್ತದೆ. ಅಮೆರಿಕದಲ್ಲಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ವಿದ್ಯಾರ್ಥಿ ವಿದೇಶಿ ವಿದ್ಯಾರ್ಥಿಗಳಿಗೆ ಎಫ್ -1 ವೀಸಾ ನೀಡಲಾಗುತ್ತದೆ. ಈ ವೀಸಾಗಳನ್ನು ಹೊಂದಿದವರು ಹೆಚ್ -1 ವೀಸಾಕ್ಕೆ ಬದಲಾವಣೆ ಬಯಸಿದರೆ 88 ಲಕ್ಷ ರೂ. ಶುಲ್ಕದ ಹೊರೆ ಅನ್ವಯವಾಗುವುದಿಲ್ಲ. ಅಮೆರಿಕದಲ್ಲಿ ಈಗಾಗಲೇ ನೆಲೆಸಿರುವ ನೌಕರರಿಗೂ ಅಧಿಕ ಶುಲ್ಕದ ಹೊರೆ ತಪ್ಪಲಿದೆ ಎಂದು ಹೇಳಲಾಗಿದೆ.