ಶಿವಮೊಗ್ಗ: ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದ ನಾಲ್ಕು ಆನೇಗಳು ಅನಾರೋಗ್ಯಕ್ಕೀಡಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶ ನೀಡಿದ್ದಾರೆ.
ಈ ಬಗ್ಗೆ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಪತ್ರ ಬರೆದಿರುವ ಸಚಿವರು, ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಶಿವಮೊಗ್ಗ ದಸರಾ ಮಹೋತ್ಸವಕ್ಕೆ ಕಳುಹಿಸಲಾಗಿದ್ದ 35 ವರ್ಷದ ಬಾಲಣ್ಣ ಆನೆಗೆ ಐವಿ ಚುಚ್ಚು ಮದ್ದು ನೀಡುವ ಸಂದರ್ಭದಲ್ಲಿ ಆದ ನಿರ್ಲಕ್ಷ್ಯದಿಂದ ಸೋಂಕು ತಗುಲಿ ನರಳುತ್ತಿದೆ. ಇದರ ಜೊತೆಗೆ ಆನೆ ಶಿಬಿರದಲ್ಲಿರುವ ಸಾಗರ್ ಸೇರಿದಂತೆ ನಾಲ್ಕು ಆನೆಗಳು ಗಾಯದಿಂದ ಬಳಲುತ್ತಿವೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು.
ರಾಜ್ಯದ ಎಲ್ಲಾ ಆನೆ ಶಿಬಿರಗಳಲ್ಲಿ ಮತ್ತು ಮೃಗಾಲಯಗಳಲ್ಲಿ ವೈದ್ಯಾಧಿಕಾರಿಗಳು ಇರಬೇಕು. ವೈದ್ಯಾಧಿಕಾರಿಗಳ ಕೊರತೆ ಬಗ್ಗೆ ವರದಿಯಾಗಿದ್ದು, ತಕ್ಷಣ ಗುತ್ತಿಗೆ ಆಧಾರದ ಮೇಲೆ ಅಥವಾ ನಿಯೋಜನೆ ಮೂಲಕ ವೈದ್ಯರನ್ನು ನೇಮಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಬಾಲಣ್ಣ ಆನೆಗೆ ಚುಚ್ಚುಮದ್ದು ನೀಡುವಾಗ ವೈದ್ಯಾಧಿಕಾರಿ, ಇಲಾಖೆ ಅಧಿಕಾರಿ, ಸಿಬ್ಬಂದಿ ಯಾರದ್ದೇ ನಿರ್ಲಕ್ಷ್ಯ ಕಂಡುಬಂದಲ್ಲಿ ಅವರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸಿನೊಂದಿಗೆ ಒಂದು ವಾರದೊಳಗೆ ಸಮಗ್ರ ವರದಿಯನ್ನು ಸಚಿವರ ಕಚೇರಿಗೆ ಕಳುಹಿಸುವಂತೆ ಸೂಚಿಸಿದ್ದಾರೆ.