ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯದ ಮೇಲೆ ಅನ್ಯಾಯ ಮಾಡುತ್ತಿದೆ. ಅನುದಾನ ಬಿಡುಗಡೆಯಲ್ಲಿಯೂ ತಾರತಮ್ಯ ಮಾಡಿದೆ. ರಾಜ್ಯದ ಬಿಜೆಪಿ ಸಂಸದರು, ಕೇಂದ್ರ ಸಚಿವರು ನಯಾ ಪೈಸೆ ಕೇಂದ್ರದಿಂದ ಹಣ ಬಿಡುಗಡೆ ಮಾಡಿಸಿ ತಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಗಾಂಧಿನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಹಾಗೂ ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಂಸದರು ಕರ್ನಾಟಕಕ್ಕೆ ಕೊಡಬೇಕಾದ ಹಣ, ಅನುದಾನ ಯಾವುದನ್ನೂ ಕೇಂದ್ರದ ಬಳಿ ಕೇಳುತ್ತಿಲ್ಲ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಆತ ಕೂಡ ಮೊಡಿಯವರ ಬಳಿ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕೇಳಿಲ್ಲ. ಅದಕ್ಕೆ ನಾನು ಆತನನ್ನು ಅಮವಾಸ್ಯೆ ತೇಜಸ್ವಿ ಸೂರ್ಯ ಎಂದು ಕರೆಯುತ್ತೇನೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರ ನೀಡಬೇಕಿರುವ ಅನುದಾನವನ್ನು ನಯಾ ಪೈಸೆ ಕೊಡುತ್ತಿಲ್ಲ ಇಷ್ಟಾಗ್ಯೂ ಸಂಸದರು ಕೇಂದ್ರದ ಬಳಿ ಬಾಯಿ ಬಿಡುತ್ತಿಲ್ಲ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸುತ್ತಿಲ್ಲ ಎಂದು ಕಿಡಿಕಾರಿದರು.
ಇನ್ನು ಕೇಂದ್ರ ಸಚಿವರಾಗಿರುವ ಹೆಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಇವರ್ಯಾರೂ ಅಲ್ಲಿ ಕೇಂದ್ರದ ಬಳಿ ಬಾಯಿ ಬಿಡುವುದಿಲ್ಲ. ರಾಜ್ಯದ ಅಭಿವೃದ್ಧಿಗಾಗಿ ಸಂಸದರು, ಕೇಂದ್ರಸಚಿವರು ಗಮನ ಹರಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿಯವರಿಗೆ ಕರ್ನಾಟಕದ ಮೇಲೆ ದ್ವೇಷ. ಮೋದಿ ನೀವು ನೋಡಿದಷ್ಟು ಒಳ್ಳೆಯವರಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹಣ ಬರುತ್ತಿಲ್ಲ. ನಾವು ಕಟ್ತಿರುವ ತೆರಿಗೆ ಹಣವನ್ನೂ ವಾಪಾಸ್ ಕೊಟ್ಟಿಲ್ಲ ಎಂದು ಗುಡುಗಿದರು.