ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿರುವ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ಸೌಲಭ್ಯ ನೀಡುವ ಪ್ರಕ್ರಿಯೆಗೆ ನವೆಂಬರ್ 2ರಂದು ಅಧಿಕೃತ ಚಾಲನೆ ನೀಡಲಾಗುವುದು.
ಜಿಬಿಎ ವೆಬ್ಸೈಟ್ ಹಾಗೂ ವಿಶೇಷ ಆ್ಯಪ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಬೆಂಗಳೂರು ಮಹಾನಗರದಲ್ಲಿ 7.5 ಲಕ್ಷದಷ್ಟು ಬಿ ಖಾತಾ ಆಸ್ತಿಗಳಿದ್ದು, 100 ದಿನದಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಮಾರ್ಗಸೂಚಿ ದರದ ಶೇಕಡ 5ರಷ್ಟು ಮೊತ್ತವನ್ನು ಅನುಮೋದನೆ ಶುಲ್ಕವಾಗಿ ಪಾವತಿಸಬೇಕಿದೆ. 2000 ಚದರ ಮೀಟರ್ ವಿಸ್ತೀರ್ಣದವರೆಗಿನ ಆಸ್ತಿಗಳಿಗೆ ಎ ಖಾತಾ ಸೌಲಭ್ಯ ನೀಡಲಾಗುವುದು. ಮೊದಲು ನಿವೇಶನಕ್ಕೆ ಮಾತ್ರ ಎ ಖಾತಾ ನೀಡಲಿದ್ದು, ನಂತರ ಸರ್ಕಾರ ಪ್ರತ್ಯೇಕವಾಗಿ ರೂಪಿಸುವ ನಿಯಮದಡಿ ಆ ನಿವೇಶನಗಳಲ್ಲಿ ನಿರ್ಮಿಸಿದ ಕಟ್ಟಡಗಳಿಗೆ ಎ ಖಾತಾ ಮಾನ್ಯತೆ ನೀಡಲಾಗುತ್ತದೆ.
ಆಸ್ತಿ ಮಾಲೀಕರು ಆನ್ಲೈನ್ ನಲ್ಲಿ ಜಿಬಿಎ ನಿಗದಿಪಡಿಸಿದ ದಾಖಲೆ ಪತ್ರ ನೀಡಬೇಕಿದೆ. ಆಧಾರ್ ಕಾರ್ಡ್, ಸ್ವತ್ತಿನ ನೋಂದಣಿ ಪತ್ರ, ಇ- ಖಾತೆ, ವಾಸ ಸ್ಥಳದ ವಿವರ, ಕಂದಾಯ ಮತ್ತು ಇತರೆ ಶುಲ್ಕ ಪಾವತಿ ಮಾಹಿತಿ ನೀಡಬೇಕು. ಮಾಲೀಕರು ವೆಬ್ಸೈಟ್ ಗೆ ಮಾಹಿತಿಯನ್ನು ಅಪ್ಲೋಡ್ ಮಾಡಬಹುದು. ಈ ಬಗ್ಗೆ ಜಿಬಿಎ ವಿವರಣೆ ನೀಡಲಿದೆ. ಅರ್ಜಿ ಸಲ್ಲಿಸಿದ ಬಳಿಕ ಕಾಲಮಿತಿಯೊಳಗೆ ಜಿಬಿಎ ಸಿಬ್ಬಂದಿ ಪರಿಶೀಲನೆ ನಡೆಸಿ ಅಗತ್ಯ ದಾಖಲೆ ದೃಢಪಡಿಸಿ ಪರಾಮರ್ಶೆ ನಡೆಸಿ ನಿಯಮಾನಸಾರ ಎ ಖಾತಾ ವಿತರಿಸಲಿದ್ದಾರೆ.
ಅರ್ಜಿ ನೋಂದಣಿಗೆ 500 ರೂ. ಶುಲ್ಕ ಹೊರತುಪಡಿಸಿ ಇತರೆ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ. ಅಧಿಕಾರಿಗಳು ದಾಖಲೆ ಪರಿಶೀಲನೆ ವೇಳೆ ವಿವಿಧ ಶುಲ್ಕಗಳ ಲೆಕ್ಕಾಚಾರ ನಡೆಸಿ ಪಾವತಿಗೆ ಗಡುವು ನೀಡಲಾಗುತ್ತದೆ. ಪೂರ್ಣ ಹಣ ಪಾವತಿಸಿದ ನಂತರ ಎ ಖಾತಾ ದಾಖಲಾತಿ ವಿತರಿಸಲಾಗುವುದು.