ಬೆಂಗಳೂರು: ದೀಪಾವಳಿ ಹಬ್ಬದ ಪಟಾಕಿ ಸಿಡಿದು 14 ಮಂದಿ ಗಾಯಗೊಂಡಿದ್ದಾರೆ. ಹಬ್ಬದ ಸಂಭ್ರಮದ ನಡುವೆ ಬೆಂಗಳೂರಿನಲ್ಲಿ ದುರ್ಘಟನೆಗಳು ಕೂಡ ಸಂಭವಿಸಿದೆ. ಐವರು ಮಕ್ಕಳು ಸೇರಿದಂತೆ 14 ಜನ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದಾರೆ.
ಸಿಡಿಸುವವರಿಗಿಂತ ನೋಡುತ್ತಾ ನಿಂತವರು, ರಸ್ತೆ ಬದಿಯಲ್ಲಿ ತಮ್ಮ ಪಾಡಿಗೆ ತಾವು ಹೋಗುತ್ತಿದ್ದವರು ಕೂಡ ಗಾಯಗೊಂಡಿದ್ದಾರೆ. ಪಟಾಕಿ ಹಚ್ಚುವಾಗ ಕಣ್ಣಿಗೆ ಕಿಡಿಗಳು ಸಿಡಿದು ಮೂರು ವರ್ಷದ ಬಾಲಕನ ಕಣ್ಣಿಗೆ ಸಣ್ಣ ಪ್ರಮಾಣ ಗಾಯವಾಗಿದ್ದು, ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ನೀಡಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಪಟಾಕಿ ಸಿಡಿತದಿಂದ ಹಾರಿ ಬಂದ ಪಟಾಕಿ ಕಿಡಿಗಳು 12 ವರ್ಷದ ಬಾಲಕಿ ಕಣ್ಣಿಗೆ ಬಿದ್ದು ಗಾಯವಾಗಿದೆ. ಬಾಲಕಿಯ ಕಾರ್ನಿಯಾ ಭಾಗಕ್ಕೆ ಲಘು ಹಾನಿಯಾಗಿದ್ದು, ಪಟಾಕಿ ಕಣಗಳನ್ನು ಹೊರತೆಗೆಯಲಾಗಿದೆ. ಚಿಕಿತ್ಸೆ ಮುಂದುವರೆದಿದೆ ಎಂದು ನಾರಾಯಣ ಆಸ್ಪತ್ರೆ ತಿಳಿಸಿದೆ.
ಇನ್ನು ಸೋಮವಾರ ಮಧ್ಯಾಹ್ನ 11 ವರ್ಷದ ಬಾಲಕ ಬಿಜಿಲಿ ಪಟಾಕಿ ಸಿಡಿಸುವಾಗ ಪಟಾಕಿ ಕಣ್ಣಿಗೆ ಸಿಡಿದು ತೀವ್ರ ಪ್ರಮಾಣದ ಗಾಯವಾಗಿದ್ದು ಬಾಲಕನಿಗೆ ಚಿಕಿತ್ಸೆ ನೀಡಲಾಗಿದೆ. 12 ಮತ್ತು 14 ವರ್ಷದ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರಿಗೆ ಚಿಕಿತ್ಸೆ ನೀಡಲಾಗಿದ್ದು, ಮೂವರನ್ನು ಮನೆಗೆ ಕಳುಹಿಸಲಾಗಿದೆ ಎಂದು ಮಿಂಟೋ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಶೇಖರ್ ಕಣ್ಣಿನ ಆಸ್ಪತ್ರೆಯಲ್ಲಿ ಐವರು ಪಟಾಕಿ ಸಿಡಿತದ ಗಾಯಗಳಿಂದ ಚಿಕಿತ್ಸೆ ಪಡೆದುಕೊಂಡಿದ್ದಾರೆ.