ಬೆಂಗಳೂರು: ದುಬೈನಿಂದ ಮಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ಬಾಂಬ್ ಎಂಬ ಶಬ್ದ ಬರೆದು ಹುಚ್ಚಾಟವಾಡಿರುವ ಘಟನೆ ನಡೆದಿದೆ.
ಇಂಡಿಗೋ ವಿಮಾನದಲ್ಲಿ ಪ್ರಯಾಣಿಕ ಬಾತ್ ರೂಮ್ ನಲ್ಲಿ ಬಾಂಬ್ ಎಂದು ಪೆನ್ ನಿಂದ ಬರೆದು ಬಂದಿದ್ದಾನೆ. ಇದನ್ನು ಗಮನಿಸಿದ ಪ್ರಯಾಣಿಕರು ಆತಂಕಕ್ಕೀಡಾಗಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ವಿಮಾನವನ್ನು ಮಂಗಳೂರು ಬದಲಾಗಿ ತಡರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಯಿತು.
168 ಪ್ರಯಾಣಿಕರನ್ನು ತಕ್ಷಣ ವಿಮಾನದಿಂದ ಸುರಕ್ಷಿತವಾಗಿ ಕೆಳಗಿಳಿಸಿ ಪರಿಶೀಲನೆ ನಡೆಸಲಾಯಿತು. ವಿಮಾನದಲ್ಲಿ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಬಾಂಬ್ ಬೆದರಿಕೆ ಪ್ರಯಾಣಿಕನೊಬ್ಬನ ಹುಚ್ಚಾಟ. ಯಾವುದೇ ಅಪಾಯವಿಲ್ಲ ಎಂದು ತಿಳಿದುಬಂದಿದ್ದು, ವಿಮಾನದಲ್ಲಿ ಬಾಂಬ್ ಎಂದು ಪದ ಬರೆದ ವ್ಯಕ್ತಿ ಯಾರು ಎಂಬುದು ಗೊತ್ತಾಗುತ್ತಿದ್ದಂತೆ ಆತನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ.