ಶಿವಮೊಗ್ಗ: ಜಾತಿ ನಿಂದನೆ ಪ್ರಕರಣದಲ್ಲಿ ಐದು ಮಂದಿಗೆ ಎರಡು ವರ್ಷ ಕಠಿಣ ಕಾರಾಗೃಹ ಶಿಕ್ಷೆ, ತಲಾ 10,000 ರೂ. ದಂಡ, ತಪ್ಪಿದಲ್ಲಿ ಒಂದು ತಿಂಗಳ ಸಾದಾ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಸಂತ್ರಸ್ತೆಗೆ 2.50 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಧೀಶರಾದ ಇಂದ್ರಾಣಿ ಮೈಲಿಸ್ವಾಮಿ ಚೆಟ್ಟಿಯಾರ್ ತೀರ್ಪು ಪ್ರಕಟಿಸಿದ್ದಾರೆ. ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮದ ಚಂದ್ರಪ್ಪ, ಗಂಗಮ್ಮ, ಸಂತೋಷ, ಮಂಜುನಾಥ, ಕವಿತಾ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ. ಗುಡಿಸಲನ್ನು ಕಿತ್ತು ಹಾಕಿ ವಸ್ತುಗಳನ್ನು ಹೊರಗೆ ಹಾಕಿದ್ದಾರೆ ಎಂದು ಹಿರಿಯೂರು ತಾಂಡಾ ನಿವಾಸಿ ಮಹಿಳೆಯೊಬ್ಬರು 2023ರಲ್ಲಿ ಭದ್ರಾವತಿ ಕಾಗದನಗರ ಠಾಣೆಗೆ ಜಾತಿನಿಂದನೆ ದೂರು ನೀಡಿದ್ದರು.
ಈ ಪ್ರಕರಣದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ, ಡಿವೈಎಸ್ಪಿ ಉಮೇಶ್ ಈಶ್ವರ ನಾಯ್ಕ ಅವರು ಆರೋಪಿಗಳ ವಿರುದ್ಧ ಕೋರ್ಟಿಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ತನಿಖಾ ಸಹಾಯಕರಾಗಿ ಪೊಲೀಸ್ ಅನ್ನಪೂರ್ಣ ಕಾರ್ಯನಿರ್ವಹಿಸಿದ್ದರು. ಸರ್ಕಾರಿ ಅಭಿಯೋಜಕರಾದ ರತ್ನಮ್ಮ ವಾದ ಮಂಡಿಸಿದ್ದರು.