ಬೆಳಗಾವಿ: ರೋಗಿಗಳಿಗೆ ಚಿಕಿತ್ಸೆ ನೀಡದೇ ಜಗಳ ಮಾಡಿಕೊಂಡು ಪ್ರತಿಷ್ಠೆ ಮೆರೆಯುತ್ತಿದ್ದ ಇಬ್ಬರು ವೈದ್ಯರನ್ನು ಆರೋಗ್ಯ ಇಲಾಖೆ ಅಮಾನತುಗೊಳಿಸಿ ಆದೇಶ ಹೊರಡಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಚಿಕ್ಕೋಡಿ ತಾಲೂಕಿನ ತಾಯಿ ಮಕ್ಕಳ ಆಸ್ಪತ್ರೆಯ ಡಾ. ಜಯಲಕ್ಷ್ಮಿ ಮುಸಾಳೆ ಹಾಗೂ ಡಾ. ಕಮಲಾ ಕುಳಗೇರಿ ಅಮಾನತುಗೊಂಡ ವೈದ್ಯರು. ಇಬ್ಬರನ್ನು ಅಮಾನತು ಮಾಡಿ ಆರೋಗ್ಯ ಇಲಾಖೆ ಆಯುಕ್ತ ಶಿವಕುಮಾರ್ ಕೆ.ಬಿ ಆದೇಶ ಹೊರಡಿಸಿದ್ದಾರೆ.
ಈ ಇಬ್ಬರು ಮಹಿಳಾ ವೈದ್ಯರು ಆಸ್ಪತ್ರೆ ದಾಖಲಾಗಿದ್ದ ಮಕ್ಕಳು, ಗರ್ಭಿಣಿಯರಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿರಲಿಲ್ಲ. ಒಬ್ಬರು ನೋಡಿದ ಗರ್ಭಿಣಿಯನ್ನು ಮತ್ತೊಬ್ಬರು ನೋಡಿ ಚಿಕಿತ್ಸೆ ಕೊಡುತ್ತಿರಲಿಲ್ಲ. ಇದರಿಂದಾಗಿ ಆಸ್ಪತ್ರೆಗೆ ಬರುವ ಗರ್ಭಿಣಿ, ಮಹಿಳೆಯರು, ಮಕ್ಕಳು ತೊಂದರೆ ಅನುಭವಿಸುತ್ತಿದ್ದರು. ವೈದ್ಯರ ಜಗಳ ಸಾಮಾಜಿಕ ಜಾಲತಾಣಗಳಲ್ಲಿಯೂ ಸುದ್ದಿಯಾಗಿತ್ತು.
ಈ ಬೆಳವಣಿಗೆ ಬೆನ್ನಲ್ಲೇ ಆರೋಗ್ಯ ಇಲಾಖೆ ಇಬ್ಬರು ವೈದ್ಯರನ್ನು ಸಸ್ಪೆಂಡ್ ಮಾಡಿ ಕ್ರಮ ಕೈಗೊಂಡಿದೆ.