ಬೆಂಗಳೂರು: ಸರ್ಕಾರಿ ಜಾಗದಲ್ಲಿ ಸಂಘಗಳ ಚಟುವಟಿಕೆಗೆ ಅನುಮತಿ ಕಡ್ಡಾಯವಾಗಿದ್ದು, ಈ ಕುರಿತು ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.
ಸಂಪುಟದ ತೀರ್ಮಾನದಂತೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಇಂದಿನಿಂದಲೇ ರಾಜ್ಯ ಸರ್ಕಾರದ ಆದೇಶ ಜಾರಿಯಾಗಲಿದೆ. ಸರ್ಕಾರಿ ಶಾಲಾ-ಕಾಲೇಜುಗಳು, ಅನುದಾನಿತ ಶಾಲೆಗಳು ಉನ್ನತ ಶಿಕ್ಷಣ ಇಲಾಖೆ ಸಾಕ್ಷರತಾ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅನುಮತಿ ಪಡೆಯಬೇಕು.
ಉದ್ಯಾನವನ, ಮೈದಾನಗಳು ಇತರೆ ತೆರೆದ ಸ್ಥಳಗಳ ಬಗ್ಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ ಅನುಮತಿ ಪಡೆಯಬೇಕು.
ರಸ್ತೆಗಳು, ಸರ್ಕಾರದ ಇತರೆ ಆಸ್ತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಕಮಿಷನರ್, ಅಧೀಕ್ಷಕರ ಒಪ್ಪಿಗೆ ಪಡೆಯಬೇಕು ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಹಲವಾರು ಖಾಸಗಿ ಸಂಸ್ಥೆಗಳು, ಸಂಘಗಳು ತಮ್ಮ ಚಟುವಟಿಕೆಗಳು, ಪ್ರಚಾರ, ತರಬೇತಿ, ಉತ್ಸವಗಳು ಹಾಗೂ ಸದಸ್ಯರ ಮತ್ತು ಬೆಂಬಲಿಗರ ಸಭೆಗಳು ನಡೆಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳು / ಸರ್ಕಾರದ ಆಸ್ತಿಗಳು, ಜಮೀನುಗಳು, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳು ಇತ್ಯಾದಿಗಳನ್ನು ಸರ್ಕಾರ ಅಥವಾ ಸಂಬಂಧಿತ ಇಲಾಖೆಗೆ ಮುಂಚಿತವಾಗಿ ಅನುಮತಿ ಪಡೆಯದೆ, ಅನೇಕ ಸಂದರ್ಭಗಳಲ್ಲಿ ಮಾಹಿತಿ ನೀಡದೆ ಬಳಸಿಕೊಳ್ಳುತ್ತಿರುವುದು ಕಂಡುಬಂದಿದೆ. ಇಂತಹ ಕ್ರಿಯೆಗಳು ಅಕ್ರಮ ಪ್ರವೇಶ (Tresspass) ಎಂದು ಪರಿಗಣಿಸಲ್ಪಡುತ್ತವೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಗಂಭೀರ ಬೆದರಿಕೆಯನ್ನು ಉಂಟುಮಾಡುತ್ತವೆ. ಈ ಕಾರಣದಿಂದ ಸರ್ಕಾರದ ಯಾವುದೇ ಆಸ್ತಿ /ಸ್ಥಳದ ಬಳಕೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ನಿಯಂತ್ರಿಸುವ ಸಲುವಾಗಿ ಯಾವುದೇ ಸಂಘಟನೆ, ಸಂಸ್ಥೆ, ಸಂಘವು ಆಯಾ ಸಾರ್ವಜನಿಕ ಆಸ್ತಿ/ಸ್ಥಳದ ಮಾಲೀಕತ್ವ ಹೊಂದಿದ ಸಕ್ಷಮ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆದು ಬಳಸಿಕೊಳ್ಳಲು ಅನುಮತಿ ನೀಡುವುದು ಅಗತ್ಯವಾಗಿರುತ್ತದೆ ಎಂದು ಹೇಳಲಾಗಿದೆ.