ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಎಐ(ಕೃತಕ ಬುದ್ಧಿಮತ್ತೆ) ಹಾಜರಾತಿ ಜತೆಗೆ ಶಾಲಾ ಶಿಕ್ಷಕರಿಗೂ ಇದೇ ರೀತಿ ಹಾಜರಾತಿ ಕಡ್ಡಾಯಗೊಳಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಈಗಾಗಲೇ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಕಾಲೇಜುಗಳ ಪ್ರಾಧ್ಯಾಪಕರಿಗೆ ಎಐ ಹಾಜರಾತಿ ಜಾರಿಗೆ ಸಿದ್ಧತೆ ನಡೆಸಿದೆ. ಇದರ ಬೆನ್ನಲ್ಲೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೂಡ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಎಐ ಹಾಜರಾತಿ ಜಾರಿಗೆ ತರಲು ಮುಂದಾಗಿದೆ. ಈ ಸಂಬಂಧ ರಾಷ್ಟ್ರೀಯ ಮಾಹಿತಿ ಕೇಂದ್ರ ತಂತ್ರಜ್ಞಾನ ರೂಪಿಸುತ್ತಿದ್ದು, ಇಲಾಖೆಯೊಂದಿಗೆ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸುತ್ತಿದೆ. ಇದನ್ನು ಅನುಷ್ಠಾನಗೊಳಿಸಲು ಪ್ರತ್ಯೇಕ ಡಿವೈಸ್ ಅಳವಡಿಸಲಿದ್ದು, ಒಮ್ಮೆಲೆ ಶಿಕ್ಷಕರ ಮುಖಚರ್ಯೆ ಗುರುತಿಸಿ ಹಾಜರಾತಿಗೆ ಅವಕಾಶ ನೀಡಲಿದೆ. ಇದರಿಂದಾಗಿ ಶಿಕ್ಷಕರು ಶಾಲೆಗೆ ಪದೇ ಪದೇ ಗೈರುಹಾಜರಾಗುವುದು ತಪ್ಪುತ್ತದೆ.
ಶಾಲಾ ವಿದ್ಯಾರ್ಥಿಗಳಿಗೆ ಬಿಸಿಯೂಟ, ಕ್ಷೀರ ಭಾಗ್ಯ ಮೊದಲಾದ ಸರ್ಕಾರದ ಯೋಜನೆ ಸಮರ್ಪಕವಾಗಿ ತಲುಪಿಸಲು ಮೊದಲ ಬಾರಿಗೆ ಎಐ ಹಾಜರಾತಿ ಬಳಕೆ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿತ್ತು. ಆದರೆ ಇನ್ನು ಜಾರಿ ಮಾಡಿಲ್ಲ. ಆರಂಭಿಕ ಹಂತದಲ್ಲಿ ಪಿಯು ಉಪನ್ಯಾಸಕರಿಗೆ ಎಐ ಹಾಜರಾತಿ ಜಾರಿ ಮಾಡಲಿದ್ದು, ನಂತರ ಶಾಲಾ ಶಿಕ್ಷಕರಿಗೂ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಲಾಗಿದೆ.