ಚಿತ್ರದುರ್ಗ: ರಾಜ್ಯದ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ ಇಬ್ಬರು ಹೆರಿಗೆ, ಮಕ್ಕಳ ಹಾಗೂ ಅರವಳಿಕೆ ತಜ್ಞರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮೂಲಕ ತಾಲ್ಲೂಕು ಆಸ್ಪತ್ರೆಗಳಲ್ಲಿ 24 ಗಂಟೆಯೂ ವೈದ್ಯರ ಸೇವೆ ದೊರಕುವಂತೆ ಮಾಡಲಾಗುವುದು. ಟೆಕ್ನೀಶಿಯನ್ ಗಳ ನೇಮಕ ಮಾಡಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮೊಳಕಾಲ್ಮೂರು ನೂತನ ಆಸ್ಪತ್ರೆ ನಿರ್ಮಾಣ ಸಂಬಂಧವಾಗಿ ಶುಕ್ರವಾರ ಮೊಳಕಾಲ್ಮೂರಿನ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಮೊಳಕಾಲ್ಮೂರು ಪಟ್ಟಣದಲ್ಲಿ 200 ಹಾಸಿಗೆಗಳ ಆಧುನಿಕವಾದ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಇದಕ್ಕಾಗಿ 100 ಕೋಟಿ ರೂ. ಅನುದಾನ ಮೀಸಲು ಇರಿಸಲಾಗಿದೆ. ಈಗಿರುವ ಆಸ್ಪತ್ರೆ ಆವರಣದಲ್ಲಿಯೇ ನೂತನ ಆಸ್ಪತ್ರೆ ನಿರ್ಮಿಸಬೇಕೆ? ಅಥವಾ ಪಟ್ಟಣದ ಹೊರ ವಲಯದಲ್ಲಿ ಗುರುತಿಸಲಾಗಿರುವ 5 ಎಕರೆ ಜಾಗದಲ್ಲಿ ನಿರ್ಮಿಸಬೇಕೆ ಎಂಬುದನ್ನು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಪಟ್ಟಣದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕು ಎಂಬುದು ಶಾಸಕ ಎನ್.ವೈ. ಗೋಪಾಲಕೃಷ್ಣ ಅವರ ಒತ್ತಾಸೆಯಾಗಿತ್ತು. ಇದಕ್ಕೆ ಸ್ಪಂದಿಸಿರುವ ಸರ್ಕಾರ ಅನುದಾನ ಒದಗಿಸಿದೆ. ಈ ಯೋಜನೆಯಲ್ಲಿಯೇ ಆಸ್ಪತ್ರೆಗೆ ಅಗತ್ಯ ಇರುವ ವೈದ್ಯಕೀಯ ಉಪಕರಣ, ವಸತಿ ಸಮುಚ್ಛಯ ನಿರ್ಮಾಣ ವೆಚ್ಚವನ್ನು ಸೇರಿಸಿ ವಿಸ್ತೃತ ಯೋಜನಾ ವರದಿ ಸಿದ್ದಪಡಿಸಲಾಗುವುದು. ಮುಂದಿನ ತಿಂಗಳು ಕೌನ್ಸಿಲಿಂಗ್ ಮೂಲಕ ರಾಜ್ಯದ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ ಇಬ್ಬರು ಹೆರಿಗೆ, ಮಕ್ಕಳ ಹಾಗೂ ಅರವಳಿಕೆ ತಜ್ಞರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮೂಲಕ ತಾಲ್ಲೂಕು ಆಸ್ಪತ್ರೆಗಳಲ್ಲಿ 24 ಗಂಟೆಯೂ ವೈದ್ಯರ ಸೇವೆ ದೊರಕುವಂತೆ ಮಾಡಲಾಗುವುದು. ಟೆಕ್ನೀಶಿಯನ್‍ಗಳ ನೇಮಕ ಮಾಡಿ ಎಲ್ಲ ಸಮಸ್ಯೆಗಳನ್ನು ಬಗಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಈಗಿರುವ ತಾಲ್ಲೂಕು ಆಸ್ಪತ್ರೆಯಲ್ಲಿ ನೂತನ ಆಸ್ಪತ್ರೆ ನಿರ್ಮಿಸಲು ಜಾಗದ ಕೊರತೆಯಿದೆ. ಇಲ್ಲಿ ಕೇವಲ 100 ಬೆಡ್ ಆಸ್ಪತ್ರೆ ನಿರ್ಮಿಸಬಹುದು. ಮುಂದೆ ಯಾವುದೇ ವಿಸ್ತರಣೆ ಕಾಮಗಾರಿ ನಡೆಸಲು ಸಾಧ್ಯವಾಗುವುದಿಲ್ಲ. ನಗರದ ಹೊರ ವಲಯದಲ್ಲಿ ಜಾಗದ ಕೊರತೆಯಿಲ್ಲ. 200 ಹಾಸಿಗೆಗಳ ಆಸ್ಪತ್ರೆಯ ಜೊತೆಗೆ ಕ್ವಾಟ್ರಸ್ ಸಹ ನಿರ್ಮಿಸಬಹುದು. ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಜಾಗದ ಕೊರತೆ ಇರುವುದಿಲ್ಲ. ಶೀಘ್ರವಾಗಿ ಆಸ್ಪತ್ರೆ ನಿರ್ಮಾಣ ಕಾಮಗಾರಿ ಆಗಬೇಕಿರುವುದರಿಂದ ಮುಂದಿನ ವಾರದಲ್ಲಿ ಬೆಂಗಳೂರಿನಲ್ಲಿ ಶಾಸಕರು ಹಾಗೂ ಇಲಾಖಾ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಸದ್ಯ ಮೊಳಕಾಲ್ಮೂರು ತಾಲ್ಲೂಕು ಆಸ್ಪತ್ರೆಗೆ ಆರ್ಥೋಪಿಡಿಕ್ ಸರ್ಜನ್ ನೇಮಕ ಮಾಡಲಾಗಿದ್ದು, 3 ದಿನದ ಒಳಗಾಗಿ ಸಿ.ಆರ್.ಮಿಷನ್ ಆಸ್ಪತ್ರೆಗೆ ಬರಲಿದೆ ಎಂದು ಸಚಿವ ಗುಂಡೂರಾವ್ ಮಾಧ್ಯಮದವರಿಗೆ ವಿವರ ನೀಡಿದರು.
ಈ ವೇಳೆ ಶಾಸಕ ಎನ್.ವೈ. ಗೋಪಾಲಕೃಷ್ಣ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಯೋಗೇಶ್ ಬಾಬು, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಇತರರು ಇದ್ದರು.