ಮೈಸೂರು: ಸರ್ಕಾರಿ ಜಾಗ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಂಘ-ಸಂಸ್ಥೆಗಳು ಕಾರ್ಯಕ್ರಮ, ಚಟುವಟಿಗಳನ್ನು ನಡೆಸಲು ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ಆರ್.ಎಸ್.ಎಸ್ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಂತಾಗಿದ್ದು, ಈ ಬಗ್ಗೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್.ಎಸ್.ಎಸ್ ಗೆ ಮಾತ್ರ ನಿರ್ಬಂಧ ಅಲ್ಲ, ಯಾವುದೇ ಸಂಘ-ಸಂಸ್ಥೆಗಳು ಸರ್ಕಾರಿ ಜಾಗ, ಸಾರ್ವಜನಿಕ ಸ್ಥಳ, ಉದ್ಯಾನಗಳಲ್ಲಿ ಕಾರ್ಯಕ್ರಮ ನಡೆಸುವಂತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಿರ್ಬಂಧ ಕೇವಲ ಆರ್.ಎಸ್.ಎಸ್ ಗೆ ಮಾತ್ರ ಅನ್ವಯವಲ್ಲಾ, ಎಲ್ಲಾ ಸಂಘ-ಸಂಸ್ಥೆಗಳಿಗೂ ನಿರ್ಬಂಧ ಅನ್ವಯವಾಗುತ್ತದೆ ಎಂದು ಹೇಳಿದರು.
ಆರ್.ಎಸ್.ಎಸ್ ಮಾತ್ರವಲ್ಲ, ಯಾವುದೇ ಸಂಘ-ಸಂಸ್ಥೆಗಳು ಕೂಡ ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು, ಸಾರ್ವಜನಿಕ ಸ್ಥಳಗಳು, ಉದ್ಯಾನವನ, ಸರ್ಕಾರಿ ಕಟ್ಟಡ, ಜಾಗಗಳಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಈ ಬಗ್ಗೆ 2013ರಲ್ಲಿ ಜಗದೀಶ್ ಶೆಟ್ಟರ್ ಅವರ ಸರ್ಕಾರದ ಅವಧಿಯಲ್ಲಿಯೇ ಆದೇಶ ಹೊರಡಿಸಲಾಗಿತ್ತು. ಬಿಜೆಪಿ ಸರ್ಕಾರ ಆದೇಶವನ್ನೇ ಈಗ ನಾವು ಎತ್ತಿ ಹಿಡಿದ್ದೇವೆ. ಬಿಜೆಪಿ ಮಾಡಿರುವ ಆದೇಶವನ್ನೇ ಅವರು ವಿರೋಧಿಸಿದರೆ ಹೇಗೆ? ಎಂದು ಪ್ರಶ್ನಿಸಿದರು.
ಸರ್ಕಾರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಘ-ಸಂಸ್ಥೆಗಳ ಚಟುಕಟಿಕೆಗಳಿಗೆ ಅವಕಾಶವಿಲ್ಲ. ಈ ನಿಟ್ಟಿನಲ್ಲಿ ನಿಯಮ ಜಾರಿಯಲ್ಲಿದೆ ಎಂದರು.