ಚಾಮರಾಜನಗರ: ವಾಟರ್ ಮ್ಯಾನ್ ಓರ್ವ ಗ್ರಾಮ ಪಂಚಾಯಿತಿ ಕಚೇರಿ ಮುಂದೆಯೇ ನೇಣಿಗೆ ಶರಣಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ನಡೆದಿದೆ.
ಚಿಕ್ಕಸು ನಾಯ್ಕ್ (65) ಆತ್ಮಹತ್ಯೆಗೆ ಶರಣಾಗಿರುವ ವಾಟಾರ್ ಮ್ಯಾನ್. ಹೊಂಗನೂರು ಗ್ರಾಮ ಪಂಚಾಯತ್ ನಲ್ಲಿ ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಇದೀಗ ಇದ್ದಕ್ಕಿದ್ದಂತೆ ನೇಣಿಗೆ ಶರಣಾಗಿದ್ದಾರೆ.
ಇಂದು ಬೆಳಿಗ್ಗೆ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಬಳಿ ಬಂದಿದ್ದಾಗ ಕಚೇರಿ ಮುಂದೆಯೇ ಚಿಕ್ಕಸು ನಾಯ್ಕ್ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಂಡು ಶಾಕ್ ಆಗಿದ್ದಾರೆ. ಗ್ರಾಮ ಪಂಚಾಯತ್ ಕಚೇರಿ ಬಾಗಿಲು ಬಳಿಯೇ ನೇಣಿಗೆ ಶರಣಾಗಿದ್ದಾರೆ.
ಘಟನಾ ಸ್ಥಳಕ್ಕೆ ಚಾಮರಾಜನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೇತನಕೊಡದೇ ಪಿಡಿಒ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷೆ ಸತಾಯಿಸುತ್ತಿದ್ದರು. ಸಂಬಳ ಕೇಳಿದರೆ ಬೆದರಿಸುತ್ತಿದ್ದರು. ಇದರಿಂದ ಮನನೊಂದು ವಾಟರ್ ಮ್ಯಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.