ವಿಜಯಪುರ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಗ್ರಾಮವೊಂದರಲ್ಲಿ ಪರಿಶಿಷ್ಟ ಜಾತಿ ಬಾಲಕಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ.
ಮೂರು ತಿಂಗಳಿನಿಂದ ಬಾಲಕಿಯನ್ನು ಪ್ರೀತಿಸುವುದಾಗಿ ಮಾಳಿಂಗರಾಯ ದಂಡೋಜಿ ಪೀಡಿಸುತ್ತಿದ್ದ. ಬಾಲಕಿಗೆ ಬೇರೆ ಯುವಕನ ಜೊತೆಗೆ ಮದುವೆ ಮಾಡಲು ಪೋಷಕರು ಚರ್ಚೆ ನಡೆಸಿದ್ದರು. ಇದನ್ನು ತಿಳಿದ ಆರೋಪಿ, ನನ್ನನ್ನೇ ಮದುವೆಯಾಗಬೇಕು ಎಂದು ಬಾಲಕಿಗೆ ದೈಹಿಕ, ಮಾನಸಿಕ ಹಿಂಸೆ ನೀಡಿದ್ದರಿಂದ ಬೇಸರಗೊಂಡು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಬಾಲಕಿಯ ಪೋಷಕರು ದೂರು ನೀಡಿದ್ದು, ಆರೋಪಿ ಮಾಳಿಂಗರಾಯ ದಂಡೋಜಿ ಮತ್ತು ಆತನ ಸ್ನೇಹಿತ ಶಿವನಗೌಡ ಬಿರಾದಾರ ಹಾಗೂ ಮತ್ತೊಬ್ಬನ ವಿರುದ್ಧ ಪೋಕ್ಸೋ ಮತ್ತು ದೌರ್ಜನ್ಯ ತಡೆ ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.
ಸಂತ್ರಸ್ತೆ ಕುಟುಂಬಕ್ಕೆ ಜಿಲ್ಲಾಡಳಿತ ದೌರ್ಜನ್ಯ ತಡೆ ಕಾಯ್ದೆಯಡಿ 8.25 ಲಕ್ಷ ರೂ. ಮಂಜೂರು ಮಾಡಿದ್ದು, ಮೊದಲ ಹಂತದಲ್ಲಿ 4.12 ಲಕ್ಷ ರೂ. ಚೆಕ್ ಅನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ವಿತರಿಸಿದ್ದಾರೆ.