ಬೆಂಗಳೂರು: ಪೊಲೀಸ್ ಮತ್ತು ಸೇನಾ ಕ್ಯಾಂಟೀನ್ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ದಿನಬಳಕೆ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಸಿಗುವಂತೆ ಮಾಡಲು ಎಂ.ಎಸ್.ಐ.ಎಲ್.ನಿಂದ ಸೂಪರ್ ಮಾರ್ಕೆಟ್ ಆರಂಭಿಸಲು ಚಿಂತನೆ ನಡೆದಿದೆ.
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಖನಿಜ ಭವನದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅರೆಸೇನಾ ಪಡೆಗಳ ನೌಕರರು, ರಾಜ್ಯದ ಪೊಲೀಸ್ ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ದಿನ ಬಳಕೆ ವಸ್ತುಗಳ ಪೂರೈಕೆಗೆ ಕ್ಯಾಂಟೀನ್ ಸ್ಥಾಪಿಸಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದ ಆರು ಲಕ್ಷ ಸರ್ಕಾರಿ ನೌಕರರಿಗೂ ರಿಯಾಯಿತಿ ದರದಲ್ಲಿ ದಿನಬಳಕೆ ವಸ್ತುಗಳ ಪೂರೈಕೆಗೆ ಸೂಪರ್ ಮಾರ್ಕೆಟ್ ಸ್ಥಾಪಿಸಲು ಚಿಂತನೆ ನಡೆದಿದೆ. ಇದಕ್ಕೆ ಸಬ್ಸಿಡಿ ಅಥವಾ ತೆರಿಗೆ ವಿನಾಯಿತಿ ಪಡೆಯುವ ಕುರಿತು ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಬೇಕಿದೆ. ಸೂಪರ್ ಮಾರ್ಕೆಟ್ ಸ್ಥಾಪನೆಯ ಬಗ್ಗೆ ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.