ರಾಯಚೂರು: ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಯತ್ನಾಳ್ ಅವರನ್ನು ಶಿವಸೇನಾ ಶಿಂಧೆ ಬಣ ತಮಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದೆ.
ಶಿವಸೇನಾ ಶಿಂಧೆ ಬಣದ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಯತ್ನಾಳ್ ಶಿವಸೇನಾ ಪಕ್ಷಕ್ಕೆ ಬರುವುದಾದರೆ ಅವರಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತೇವೆ. ಅವರು ನಮ್ಮೊಂದಿಗೆ ಹಿಂದುತ್ವದ ಕೆಲಸಕ್ಕೆ ಬರುವುದಾದರೆ ನಾವು ಅವರೊಂದಿಗೆ ಕೈ ಜೋಡಿಸುತ್ತೇವೆ ಎಂದಿದ್ದಾರೆ.
ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ನಾವು ಯತ್ನಾಳ್ ಜೊತೆ ಒಂದೇ ವೇದಿಕೆ ಹಂಚಿಕೊಂಡಿದ್ದೆವು. ಆ ಸಂದರ್ಭದಲ್ಲಿ ಚುನಾವಣೆ ಬಗ್ಗೆ ಚರ್ಚೆಯಾಗಿರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಮಾತುಕತೆಗೆ ಅವಕಾಶವಿದೆ. ಹಿಂದುತ್ವದ ಸರ್ಕಾರ ತರಬೇಕು ಎಂಬುದು ನಮ್ಮ ಉದ್ದೇಶ. ಇನ್ನೂ ಎರಡು ವರ್ಷ ಕಾಲಾವಕಾಶವಿರುವುದರಿಂದ ಹೊಂದಾಣಿಕೆ ಬಗ್ಗೆ ಮಾತುಕತೆಗೆ ಸಮಯವಿದೆ. ಮಹಾರಾಷ್ಟ್ರದಲ್ಲಿ ಶಿವಸೇನಾ-ಎನ್ ಡಿಎ ಮೈತ್ರಿಕೂಟದಲ್ಲಿರುವಂತೆಯೇ ಕರ್ನಾಟಕದಲ್ಲಿಯೂ ಹೈಕಮಾಂಡ್ ಸೂಚನೆಯಂತೆ ಕಾರ್ಯನಿರ್ವಹಿಸಲಾಗುವುದು ಎಂದರು.