ಬೆಂಗಳೂರು: ಐಷಾರಾಮಿ ಕಾರುಗಳ ಗಾಜು ಒಡೆದು ಕಳ್ಳತನ ಮಾಡುತ್ತುದ್ದ ಕುಖ್ಯಾತ ರಾಮ್ ಜೀ ಗ್ಯಾಂಗ್ ನ ಕಿಂಗ್ ಪಿನ್ ನನ್ನು ಬೆಂಗಳೂರಿನ ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಕುಖ್ಯಾತ ರಾಮ್ ಜೀ ಗ್ಯಾಂಗ್ ನ ಕಿಂಗ್ ಪಿನ್ ಜೈ ಶೀಲನ್ ಬಂಧಿತ ಆರೋಪಿ. ಜೈ ಶೀಲನ್ ತನ್ನ 19 ವರ್ಷದ ಮಗ ದೀನ್ ದಯಾಳ್ ಜೊತೆ ಸೇರಿಕೊಂಡು ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ. ಹಲವು ವರ್ಷಗಳಿಂದ ಕರ್ನಾಟಕ ಪೊಲೀಸರಿಗೆ ಈ ಅಪ್ಪ-ಮಗನ ರಾಮ್ ಜೀ ಗ್ಯಾಂಗ್ ತಲೆನೋವಾಗಿ ಪರಿಣಮಿಸಿತ್ತು.
ಇದೀಗ ತಮಿಳುನಾಡಿನಲ್ಲಿ ವಿಜಯನಗರ ಠಾಣೆ ಪೊಲೀಸರು ಜೈ ಶೀಲನ್ ನನ್ನು ಬಂಧಿಸಿದ್ದು, ಮಗ ದೀನ್ ದಯಾಳ್ ತಪ್ಪಿಸಿಕೊಂಡಿದ್ದಾನೆ. ಆರೋಪಿಗಳು ಮೂರು ತಿಂಗಳಿಗೊಮ್ಮ ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಐಷಾರಾಮಿ ಕಾರುಗಳ ಗ್ಲಾಸ್ ಒಡೆದು ಕಳ್ಳತನ ಮಾಡುತ್ತಿದ್ದರು. ಹೀಗೆ ಒಮ್ಮೆ ಒಂದರೆ ನಾಲ್ಕೈದು ಜಿಲ್ಲೆಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು. ಇವರು ಬೆಂಗಳೂರಿನಿಂದ ಬೆಳಗಾವಿವರೆಗೂ ಐಷಾರಾಮಿ ಕಾರುಗಳ ಗಾಜು ಒಡೆದು ಕಳ್ಳತನ ಮಾಡಿದ್ದರು. ತಪ್ಪಿಸಿಕೊಂಡಿರುವ ದೀನ್ ದಯಾಳ್ ಗಾಗಿ ಶೋಧ ನಡೆಸಲಾಗಿದೆ.