ಚಿಕ್ಕಮಗಳೂರು: ವರ್ಷಕ್ಕೊಮ್ಮೆ ದರ್ಶನ ನೀಡುವ ಬಿಂಡಿಗ ದೇವಿರಮ್ಮ ಉತ್ಸವ ಅಕ್ಟೋಬರ್ 19, 20 ರಂದು ನಡೆಯಲಿದೆ.
ಇದೇ ಮೊದಲ ಬಾರಿಗೆ ಎರಡು ದಿನ ಅಕ್ಟೋಬರ್ 19ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ, ಅಕ್ಟೋಬರ್ 20ರಂದು ಬೆಳಗ್ಗೆ 7ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಿಂಡಿಗ ದೇವಿರಮ್ಮ ದರ್ಶನಕ್ಕೆ ಅವಕಾಶ ಇದೆ.
ಬರಿಗಾಲಿನಲ್ಲಿ ಭಕ್ತರು ಬೆಟ್ಟ ಏರಬೇಕಿದೆ. ಮಳೆ ಇರುವುದರಿಂದ 15 ರಿಂದ 60 ವರ್ಷದೊಳಗಿನವರಿಗೆ ಮಾತ್ರ ಬೆಟ್ಟ ಹತ್ತಲು ಅವಕಾಶ ಕಲ್ಪಿಸಲಾಗಿದೆ.
ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ, ಮುಳ್ಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಧಾರ ಜಲಪಾತಕ್ಕೆ ಬರುವ ಇತರೆ ಪ್ರವಾಸಿಗರಿಗೆ ಅಕ್ಟೋಬರ್ 19ರ ಬೆಳಿಗ್ಗೆ 6 ರಿಂದ 20ರ ಸಂಜೆ ಆರು ಗಂಟೆಯವರೆಗೆ ಜಿಲ್ಲಾಡಳಿತ ಪ್ರವೇಶ ನಿರ್ಬಂಧಿಸಿದೆ.
ಗಿರಿ ಪ್ರದೇಶದಲ್ಲಿ ಇರುವ ರೆಸಾರ್ಟ್, ಹೋಂ ಸ್ಟೇ, ವಸತಿಗೃಹಗಳಿಗೆ ಮುಂಗಡವಾಗಿ ರೂಂ ಕಾಯ್ದಿರಿಸಿದ ಪ್ರವಾಸಿಗರಿಗೆ ಪ್ರವೇಶವಿರುತ್ತದೆ. ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಮಾಣಿಕ್ಯಧಾದಾರ ಪ್ರವಾಸಕ್ಕೆ ನಿರ್ಬಂಧ ವಿಧಿಸಿದ್ದು, ಎರಡು ದಿನಗಳ ಕಾಲ ಆನ್ಲೈನ್ ಬುಕಿಂಗ್ ರದ್ದು ಮಾಡಲಾಗಿದೆ.