ಬಾಗಲಕೋಟೆ: ರಾಜ್ಯದಲ್ಲಿ ಒಂದೆಡೆ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿದ್ದರೆ ಮತ್ತೊಂದೆಡೆ ಸಂಪುಟ ಪುನಾರಚನೆ ಬಗ್ಗೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಾಸಕರ ಅಭಿಪ್ರಾಯವಿಲ್ಲದೇ ಸಿಎಂ ಆಗೋಕೆ ಸಾಧ್ಯವಿಲ್ಲ. ಶಾಸಕರ ಅಭಿಪ್ರಾಯ ಹಾಗೂ ಹೈಕಮಾಂಡ್ ಆಶಿರ್ವಾದ ಎರಡೂ ಇದ್ದರೆ ಸಿಎಂ ಆಗಲು ಸಾಧ್ಯ ಎಂದಿದ್ದಾರೆ.
ರಾಜ್ಯದಲ್ಲಿ ಬದಲಾವಣೆಯಲ್ಲಿ ಹೈಕಮಾಂಡ್ ನವರ ನಿರ್ಧಾರವೇ ಮುಖ್ಯ ಎಂದು ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಪಕ್ಷದ ವರಿಷ್ಠರ ಮತ್ತು ಶಾಸಕರ ಅಭಿಪ್ರಾಯ ಬಹಳ ಮುಖ್ಯ. ಶಾಸಕರ ಒಮ್ಮತ ಹಾಗೂ ಹೈಕಮಾಂಡ್ ನ ಆರ್ಶೀವಾದವಿರಬೇಕು. ಇಂದಿನ ಭೋಜನಕೂಟ ಕಾರ್ಯಕ್ರಮದಲ್ಲಿ ಯಾವುದೇ ವಿಶೇಷತೆ ಇಲ್ಲ. ಸಂಪುಟ ಪುನಾರಚನೆಗೂ ಇಂದಿನ ಭೋಜನಕೂಟಕ್ಕೂ ಯಾವುದೇ ಸಂಬಂಧವಿಲ್ಲ. ನವೆಂಬರ್ ತಿಂಗಳಲ್ಲಿ ಯಾವುದೇ ಕ್ರಾಂತಿಯೂ ಇಲ್ಲ ಎಂದು ಹೇಳಿದರು.