ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ತಮ್ಮ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳ ವಿರುದ್ಧ ಆರ್.ವಿ.ದೇಶಪಾಂಡೆ ಮಾತನಾಡಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶಪಾಂಡೆ ಅವರಿಗೆ ಕರೆ ಮಾಡಿ ವಿವರಣೆ ಕೇಳಿದ್ದರು. ಈ ಬಗ್ಗೆ ಸ್ವತಃ ತಾವೇ ಬೆಂಗಳೂರಿಗೆ ಬಂದು ಭೇಟಿಯಾಗಿ ಮಾತನಾಡುತ್ತೇನೆ ಎಂದು ಹೇಳಿದ್ದರು ಎನ್ನಲಾಗಿದೆ.
ಈ ಬೆಳವಣಿಗೆ ಬೆನ್ನಲ್ಲೇ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಶಾಸಕ ಆರ್.ವಿ.ದೇಶಪಾಂಡೆ, ನಾನು ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡಿಲ್ಲ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿದ್ದಾರೆ.
ದಾಂಡೇಲಿಯಲ್ಲಿ ನಡೆದ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡಿಲ್ಲ. ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಶ್ಲಾಘಿಸಿದ್ದೇನೆ. ಸಿಎಂ ಸಿದ್ದರಾಮಯ್ಯ ಬಡವರಿಗಾಗಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸಿದ್ದರಾಮಯ್ಯನವರು ಓರ್ವ ಅನುಭವ ಸಂಪನ್ನ ನಾಯಕರಾಗಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವುದು ಅವರಿಗೆ ಶಕ್ತಿ ಎಂದಿದ್ದೇನೆ. ನನ್ನ ಮಾತಿನ ಉದ್ದೇಶ ಗ್ಯಾರಂಟಿ ಯೋಜನೆಗಳ ವಿರುದ್ಧವಲ್ಲ. ಸಿದ್ದರಾಮಯ್ಯನವರ ಜನಪರ ಆಡಳಿತ ಹೊಗಳಿದ್ದೇನೆ ಹೊರತು ಟೀಕಿಸಿಲ್ಲ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಆರ್ಥಿಕ ಸಂಕಷ್ಟವಾಗಿದೆ ಎಂದು ನಾನು ಹೇಳಿಲ್ಲ. ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದು ವಿಷಾದನೀಯ ಎಂದು ಸ್ಪಷ್ಟನೆ ನೀಡಿದ್ದಾರೆ.