ಬೆಂಗಳೂರು: ಬೆಂಗಳೂರಿನ ಮತ್ತಿಕೆರೆ ಬಳಿಯ ಜೆ.ಪಿ ಪಾರ್ಕ್ ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ನಡಿಗೆ ಕಾರ್ಯಕ್ರಮ ಹಾಗೂ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಗಲಾಟೆ ಮಾಡಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ಶಾಸಕ ಮುನಿರತ್ನ ಹೈಡ್ರಾಮಾ ಮಾಡಿದ್ದರು. ಪ್ರತಿಭಟನೆ, ಗಲಾಟೆ ಬಳಿಕ ಇದೀಗ ಮೌನವಾಗಿ ಧರಣಿ ಕುಳಿತಿದ್ದಾರೆ.
ಚನ್ನಪಟ್ಟಣ, ಕನಕಪುರದಿಂದ ರೌಡಿಗಳನ್ನು ಕರೆಸಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನಾನಿಂದು ಬದುಕಿದ್ದೇನೆ ಎಂದರೆ ಪೊಲೀಸರೇ ಕಾರಣ. ಸರ್ಕಾರದ ಈ ನಡೆ ಖಂಡನೀಯ ಎಂದು ಪ್ರತಿಭಟನೆ ನಡೆಸಿದ್ದಾರೆ.
ನಡಿಗೆ ಕಾರ್ಯಕ್ರಮ ಹಾಗೂ ಸಂವಾದ ಕಾರ್ಯಕ್ರಮಕ್ಕೆ ಯಾವುದೇ ಸ್ಥಳೀಯ ಶಾಸಕರನ್ನು, ಸಂಸದರನ್ನು ಆಹ್ವಾನಿಸದೇ ಕಾಂಗ್ರೆಸ್ ಕಾರ್ಯಕ್ರಮ ಮಾಡುತ್ತಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹೋಗಿ ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ. ನಾನು ಆರ್.ಎಸ್. ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಇಲ್ಲಿಗೆ ಬಂದಿದ್ದರೆ ನನ್ನ ಟೋಪಿ ನೋಡಿ ಎ ಕರಿ ಟೋಪಿ ಎಂಎಲ್ ಎ ಎಂದು ಅವಮಾನಿಸಿದ್ದಾರೆ. ನಾನು ಓರ್ವ ಶಾಸಕ, ಜನಪ್ರತಿನಿಧಿ. ಕನಕಪುರದಲ್ಲಿ ನೀವು ದಬ್ಬಾಳಿಕೆ ಆಡಳಿತ ನಡೆಸುತ್ತೀರೆಂದು ಬೆಂಗಳೂರಿನಲ್ಲಿಯೂ ಅದೇ ರೀತಿ ದಬ್ಬಾಳಿಕೆ ನಡೆಸುತ್ತಿದ್ದೀರಾ? ಓರ್ವ ಶಾಸಕನಾಗಿರುವ ನನಗೇ ಗೌರವ ಕೊಡುತ್ತಿಲ್ಲ. ಡಿ.ಕೆ.ಶಿವಕುಮಾರ್ ದಬ್ಬಾಳಿಕೆ ರಾಜಕಾರಣ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಎಲ್ಲಾ ಬೆಳವಣಿಗೆಗಳ ಬಳಿಕ ಜೆ.ಪಿ.ಪಾರ್ಕ್ ಬಳಿ ಶಾಸಕ ಮುನಿರತ್ನ, ನಾನು ಯಾರೊಂದಿಗೂ ಮಾತನಾಡುವುದಿಲ್ಲ. ಶಾಸಕನಾಗಿರುವ ನನನ್ನು ಅವಮಾನಿಸಿದ್ದಾರೆ ಎಂದು ಕೈಯಲ್ಲಿ ಗಾಂಧೀಜಿ ಭಾವಚಿತ್ರ ಹಿಡಿದು ಏಕಾಂಗೊಯಾಗಿ ಮೌನ ಧರಣಿ ಆರಂಭಿಸಿದ್ದಾರೆ.