ಶಿವಮೊಗ್ಗ: ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗೆ ಬಿಸ್ಕೆಟ್ ಪ್ಯಾಕೆಟ್ ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಾರಣಾಧೀನ ಕೈದಿಗೆ ಬಿಸ್ಕೆಟ್ ಪ್ಯಾಕ್ ನಲ್ಲಿ ಗಾಂಜಾ ಹಾಗೂ ಸಿಗರೇಟ್ ಗಳನ್ನು ಪೂರೈಸಲು ತೆರಳುತ್ತಿದ್ದ ವೇಳೆ ಇಬ್ಬರು ಯುವಕರನ್ನು ಜೈಲು ಸಿಬ್ಬಂದಿ ಬಂಧಿಸಿದ್ದಾರೆ.
ಬಂಧಿತರನ್ನು ಭದ್ರಾಅವತಿ ನಗರದ ರಾಹಿಲ್ (19) ಹಾಗೂ ತಸೀರುಲ್ಲಾ (19) ಎಂದು ಗುರುತಿಸಲಾಗಿದೆ. ಕೈದಿ ಮೊಹಮ್ಮದ್ ಗೌಸ್ ಅಲಿಯಾಸ್ ಜಂಗ್ಲಿ ಎಂಬಾತನ ಸಂದರ್ಶನಕ್ಕೆಂದು ಬಂದಿದ್ದ ಇಬ್ಬರು ಯುವಕರು ಮೂರು ಬಿಸ್ಕೆಟ್ ಪ್ಯಾಕೆಟ್ ತಂದಿದ್ದರು. ಇದನ್ನು ಜೈಲಿ ಸಿಬ್ಬಂದಿಗಳು ಪರಿಶೀಲಿಸಿದಾಗ ಅದರಲ್ಲಿ ಕಪ್ಪು ಗಮ್ ಟೇಪ್ ಸುತ್ತಿರುವ ವಸ್ತು ಪತ್ತೆಯಾಗಿದೆ. ತೆಗೆದು ನೋಡಿದಾಗ ಅದರಲ್ಲಿ ಗಾಂಜಾ ಹಾಗೂ ಸಿಗರೇಟ್ ಇರುವುದು ಪತ್ತೆಯಾಗಿದೆ.
ವಸ್ತುಗಳಳನ್ನು ಜಪ್ತಿ ಮಾಡಿದ ಸಿಬ್ಬಂದಿ, ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ. ತುಂಗಾನಗರ ಠಾಣೆ ಪೊಲೀಸರು ಬಂಧಿತ ಯುವಕರನ್ನು ವಿಚಾರಣೆಗೊಳಪಡಿಸಿದ್ದಾರೆ.