ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡಿಗೆ ಕಾರ್ಯಕ್ರಮ ಆರಂಭವಾಗಿದ್ದು, ಮತ್ತಿಕೆರೆಯ ಜೆ.ಪಿ.ಪಾರ್ಕ್ ಬಳಿ ಬಿಜೆಪಿ ಶಾಸಕ ಮುನಿರತ್ನ ಪ್ರತಿಭಟನೆ ನಡೆಸುವ ಮೂಲಕ ಹೈಡ್ರಾಮಾ ನಡೆಸಿದ್ದಾರೆ.
ಸರ್ಕಾರದ ನಡಿಗೆ ಕಾರ್ಯಕ್ರಮಕ್ಕೆ ಈ ಭಾಗದ ಸಂಸದರನ್ನು ಆಹ್ವಾನಿಸಿಲ್ಲ, ಶಾಸಕನಾಗಿರುವ ನನ್ನನ್ನೂ ಆಹ್ವಾನಿಸಿಲ್ಲ. ಸೋತ ಅಭ್ಯರ್ಥಿಯ ಜೊತೆ ನಡಿಗೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದು ರಾಅಜಕೀಯಕ್ಕಾಗಿ ಮಾಡುತ್ತಿರುವ ಕಾರ್ಯಕ್ರಮ ಹೊರತು ಜನರಿಗಾಗಿ, ಜನರ ಸಮಸ್ಯೆ, ಕುಂದುಕೊರತೆ ಆಲಿಸಲು ಮಾಡುತ್ತಿರುವ ಕಾರ್ಯಕ್ರಮವಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸೌಜನ್ಯಕ್ಕಾದರೂ ಶಾಸಕರಿಗೆ, ಸಂಸದರಿಗೆ ಆಹ್ವಾನ ನೀಡುವುದು ಬೇಡವೇ? ಡಿಸಿಎಂ ಡಿ.ಕೆ.ಶಿವಕುಮಾರ್ ತಮಗೆ ಬೇಕಾದವರನ್ನು, ಕನಕಪುರದಿಂದ ರೌಡಿಗಳನ್ನು ಕರೆತಂದು ಇಲ್ಲಿ ನಡಿಗೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಅವರು ನನ್ನನ್ನೇ ಎ ಕರಿ ಟೋಪಿ ಎಂದು ಕರೆಯುತ್ತಿದ್ದಾರೆ. ನಾನು ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಇಲ್ಲಿ ಬಂದರೆ ಶಾಸಕ ಎನ್ನುವ ಗೌರವವನ್ನೂ ನೀಡದೇ ಎ ಕರಿ ಟೋಪಿ ಎಂಎಲ್ ಎ ಎಂದು ಕರೆಯುತ್ತಿದ್ದಾರೆ. ನಿಮಗೆ ಅಧಿಕಾರ ಇದೆ ಎಂದು ಈ ರೀತಿ ದಬ್ಬಾಳಿಕೆ ಮಾಡುವುದೇ? ಕನಕಪುರದಲ್ಲಿ ಮಾಡುತ್ತಿದ್ದೀರಾ ಅದನ್ನೇ ಬೆಂಗಳೂರಿನಲ್ಲಿಯೂ ಮಾಡುತ್ತಿದ್ದೀರಲ್ಲಾ? ಇದೆಷ್ಟು ಸರಿ? ಎಂದು ಕಿಡಿಕಾರಿದರು.
ಸಾಲದ್ದಕ್ಕೆ ಸಚಿವರು ನನ್ನ ಮೇಲೆಯೇ ಕೈ ಎತ್ತಿ ಹಲ್ಲೆಗೆ ಯತ್ನಿಸಿದ್ದಾರೆ. ನನ್ನ ಮೇಲೆ ರೌಡಿಸಂ ಮಾಡುತ್ತಿದ್ದಾರೆ. ಶಾಸಕನಾಗಿರುವ ನನ್ನನ್ನೇ ಅವಮಾನಿಸಿದ್ದಾರೆ. ನನ್ನನ್ನು ಹೊಡೆಯಲು ಕನಕಪುರ, ಚನ್ನಪಟ್ಟಣದಿಂದ ಜನರನ್ನು ಕರೆಸಿದ್ದಾರೆ, ಇದು ಸಾರ್ವಜನಿಕ ಕಾರ್ಯಕ್ರಮವಲ್ಲ ಕಾಂಗ್ರೆಸ್ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.