ರಾಮನಗರ: ಬೆಂಗಳೂರಿನ ರೌಡಿಶೀಟರ್ ಹೆಮ್ಮೆಗೆಪುರದ ಚಿರಂಜೀವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕನಕಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಕೊಲೆ ನಡೆದ 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ದೊಡ್ಡ ಕಲ್ಯಾಳ ರವಿ(35), ಹೆಬ್ಬಿದಿರು ಮೆಟ್ಟಿಲು ಪ್ರಜ್ವಲ್(23) ಮತ್ತು ಪವನ್(24) ಬಂಧಿತ ಆರೋಪಿಗಳಾಗಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಮಂಗಳವಾರ ರಾತ್ರಿ ಭದ್ರೆಗೌಡನದೊಡ್ಡಿ ಗ್ರಾಮದ ಕೆರೆಯ ಬಳಿ ರೌಡಿಶೀಟರ್ ಚಿರಂಜೀವಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಚಿರಂಜೀವಿ ಮೂರು ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಬಂದು ಭದ್ರೆಗೌಡನದೊಡ್ಡಿಯ ಅಜ್ಜಿ ಮನೆಯಲ್ಲಿ ಉಳಿದುಕೊಂಡಿದ್ದ.
ಆರೋಪಿಗಳು ಮತ್ತು ಚಿರಂಜೀವಿ ನಡುವೆ ಗಲಾಟೆಯಾಗಿ ರಾಜಿ ಮಾಡಿಕೊಂಡಿದ್ದರು. ಆರೋಪಿ ಪವನ್ ನನ್ನು ಚಿರಂಜೀವಿ ರೇಗಿಸುತ್ತಿದ್ದ. ಆತ ತನ್ನ ಸ್ನೇಹಿತರೊಂದಿಗೆ ಮಂಗಳವಾರ ರಾತ್ರಿ ಕೊಲೆ ಮಾಡಿ ಪರಾರಿಯಾಗಿದ್ದ. ಬೆಂಗಳೂರು ದಕ್ಷಿಣ ಎಸ್ಪಿ ಶ್ರೀನಿವಾಸ್ ಗೌಡ, ಡಿವೈಎಸ್ಪಿ ರಾಮಚಂದ್ರಯ್ಯ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.