ದಾವಣಗೆರೆ: ದೇಶದಾದ್ಯಂತ ಜನರ ಖಾತೆಗಳಿಂದ ಕೋಟಿ ಕೋಟಿ ಹಣ ದೋಚಿದ್ದ ಸೈಬರ್ ವಂಚಕನೊಬ್ಬನನ್ನು ದಾವಣಗೆರೆ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ಬ್ಯಾಂಕ್ ಖಾತೆಯಲ್ಲಿರುವ ಹಣ ನೋಡಿ ಪೊಲೀಸರೇ ದಂಗಾಗಿದ್ದಾರೆ. ಬಂಧಿತನನ್ನು ಸೈಯ್ಯದ್ ಅರ್ಫಾತ್ (28) ಎಂದು ಗುರುತಿಸಲಾಗಿದೆ. ಈತ ಹಾಸನ ಜಿಲ್ಲೆಯ ಬೇಲೂರು ಟೌನ್ ನ ಶಾಂತಿನಗರದ ನಿವಾಸಿ. ಸಿಸಿಟಿವಿ ಕೆಲಸ ಮಾಡುತ್ತಿದ್ದ. ಸೈಬರ್ ವಂಚನೆ ಪ್ರಕರಣದ ಎರಡನೇ ಪ್ರಮುಖ ಆರೋಪಿ ಈತ. ಕಿಂಗ್ ಪಿನ್ ಇನ್ನೂ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಬಲೆ ಬೀಸಲಾಗಿದೆ.
ಆರೋಪಿಯ ಮೊಬೈಲ್ ವಶಕ್ಕೆ ಪಡೆದು ಪರಿಶೋಲಿಸಿದಾಗ ಈತನ ಖಾತೆಯಲ್ಲಿ ಜುಲೈ 27ರಿಂದ ಆಗಸ್ಟ್ 19ರವರೆಗೆ ಸುಮಾರು 150 ಕೋಟಿ ರೂಪಾಯಿ ಆನ್ ಲೈನ್ ವಂಚನೆ ಹಣ ಜಮೆಯಾಗಿದೆ. ಆರೋಪಿಗಳು 132 ಕೋಟಿ ಹಣ ವಿತ್ ಡ್ರಾ ಮಾಡಿದ್ದಾರೆ. ಖಾತೆಯಲ್ಲಿ 18 ಕೋಟಿ ರೂಪಾಯಿ ಹಾಗೇ ಇದೆ. ಸದ್ಯ ಆರೋಪಿಯ ಖಾತೆಯನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ. ಆರೋಪಿಗಳು ದಾವಣಗೆರೆಯ ನಗರದ ನಿಟ್ಟುವಳ್ಳಿ ಕೆನರಾ ಬ್ಯಾಂಕ್ ಖಾತೆಯಿಂದ ಪ್ರಮೋದ್ ಎಂಬುವವರ 52,60,523 ರೂ ಹಣ ದೋಚಿದ್ದರು. ಈ ಸಂಬಂಧ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದಾಗ ಪೊಲೀಸರಿಗೆ ಸೈಬರ್ ವಂಚಕ ಸೈಯದ್ ಇರ್ಫಾತ್ ಸಿಕ್ಕಿಬಿದ್ದಿದ್ದಾನೆ.