ಬೆಂಗಳೂರು: ಸ್ನೇಹಿತರೊಂದಿಗೆ ರೆಸ್ಟೋರೆಂಟ್ ಗೆ ಊಟಕ್ಕೆ ತೆರಳಿದ್ದ ಬ್ಯಾಂಕ್ ಮ್ಯಾನೇಜರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರಿನ ಮೇಘಾನಂದ(31) ಮೃತಪಟ್ಟವರು. ಬೆಂಗಳೂರಿನ ಉಲ್ಲಾಳದಲ್ಲಿ ಪತ್ನಿ ಮತ್ತು 5 ತಿಂಗಳ ಮಗುವಿನೊಂದಿಗೆ ವಾಸವಾಗಿದ್ದರು. ಅವರ ತಂದೆ ಮರಿಸ್ವಾಮಿ ರೇಷ್ಮೆ ಇಲಾಖೆ ನಿವೃತ್ತ ಅಧಿಕಾರಿಯಾಗಿದ್ದಾರೆ. ಖಾಸಗಿ ಬ್ಯಾಂಕ್ ವೊಂದರಲ್ಲಿ ಮ್ಯಾನೇಜರ್ ಆಗಿ ಮೇಘಾನಂದ ಕಾರ್ಯನಿರ್ವಹಿಸುತ್ತಿದ್ದರು.
ಆರ್.ಆರ್. ನಗರ ಮುಖ್ಯರಸ್ತೆಯ ರೆಸ್ಟೋರೆಂಟ್ ಗೆ ಗುರುವಾರ ಮೂವರು ಸ್ನೇಹಿತರೊಂದಿಗೆ ಊಟಕ್ಕೆ ತೆರಳಿದ್ದ ಅವರು ಊಟದ ಬಳಿಕ ಬಿಲ್ ಪಾವತಿಸಿ ಹೊರಗೆ ಹೋಗಿದ್ದಾರೆ. ಅರ್ಧ ಗಂಟೆಯಾದರೂ ವಾಪಾಸ್ ಬರದಿದ್ದಾಗ ಸ್ನೇಹಿತರು ಹೋಗಿ ನೋಡಿದರೂ ಕಾಣಿಸಿಲ್ಲ. ರೆಸ್ಟೋರೆಂಟ್ ಮ್ಯಾನೇಜರ್ ವಿಚಾರಿಸಿ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಶೌಚಾಲಯಕ್ಕೆ ಹೋಗಿರುವುದು ಕಂಡುಬಂದಿದೆ. ತಕ್ಷಣ ಸ್ನೇಹಿತರು ಬಾಗಿಲು ತಟ್ಟಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಗಾಬರಿಯಾಗಿ ರೆಸ್ಟೋರೆಂಟ್ ಮ್ಯಾನೇಜರ್ ಗೆ ತಿಳಿಸಿದ್ದಾರೆ. ಬಾಗಿಲು ಒಡೆದು ನೋಡಿದಾಗ ಮೇಘಾನಂದ ಹೃದಯಾಘಾತದಿಂದ ಮೃತಪಟ್ಟಿರುವುದು ಗೊತ್ತಾಗಿದೆ. ಶುಕ್ರವಾರ ಮದ್ದೂರಿನಲ್ಲಿ ಮೇಘಾನಂದ ಅಂತ್ಯಕ್ರಿಯೆ ನಡೆದಿದೆ.