ಬೆಂಗಳೂರು: ಯುವತಿಯೊಂದಿಗೆ ಅನಂಚಿತವಾಗಿ ವರ್ತಿಸಿದ ಆರೋಪದ ಮೇರೆಗೆ ಆಟೋ ಚಾಲಕನನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪವನ್ ಬಂಧಿತ ಆರೋಪಿ. ಬಾಡಿಗೆ ವಿಚಾರವಾಗಿ ಈಶಾನ್ಯ ಭಾರತ ಮೂಲದ ಯುವತಿ ಜೊತೆಗೆ ಅನುಚಿತ ವರ್ತನೆ ತೋರಿಸಿದ್ದು, ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸಂತ್ರಸ್ತೆಯಿಂದ ದೂರು ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.
ಅ. 7 ರಂದು ಸಂಜೆ 7:30ರ ಸುಮಾರಿಗೆ ಕ್ಯಾಲಸನಹಳ್ಳಿಯಿಂದ ಬಾಣಸವಾಡಿಗೆ ತೆರಳಲು ಸಂತ್ರಸ್ತ ಯುವತಿ ಆಟೋ ಬುಕ್ ಮಾಡಿದ್ದಳು. ಬುಕ್ ಮಾಡಿದ್ದ ಆಟೋ ಬರುವುದು ತಡವಾಗಿದ್ದರಿಂದ ಅದೇ ಮಾರ್ಗದಲ್ಲಿ ಬಂದ ಮತ್ತೊಂದು ಆಟೋ ಹತ್ತಿದ್ದಳು. ಬುಕ್ ಮಾಡಿದ್ದ ಆಟೋವನ್ನು ರದ್ದುಪಡಿಸಿದ್ದಳು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಚಾಲಕ ಬೇರೆ ಆಟೋದಲ್ಲಿ ಹೋಗುತ್ತಿದ್ದ ಯುವತಿಯನ್ನು ತಡೆದು ಗಲಾಟೆ ಮಾಡಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆಯಲು ಯತ್ನಿಸಿದ್ದಾನೆ. ವಿಡಿಯೋ ಚಿತ್ರೀಕರಿಸಿಕೊಂಡಿದ್ದ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ.