ಬಳ್ಳಾರಿ: ಪ್ರಪಂಚದ ವಿವಿಧೆಡೆ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗಮನಿಸಿದರೆ ಮನುಷ್ಯನಿಗೆ ಪರಿಸರ ಅವಶ್ಯಕವಾಗಿದೆ. ಆದರೆ ಪರಿಸರಕ್ಕೆ ಮನುಷ್ಯನ ಅಗತ್ಯವಿಲ್ಲ, ಪ್ರಕೃತಿ ಪರಿಸರ ನಾಶವಾದರೆ ಇಡೀ ಮಾನವಕುಲವೇ ನಾಶವಾಗುತ್ತದೆ. ಪ್ರಕೃತಿ ಪರಿಸರ ಉಳಿದರೆ ಮಾತ್ರ ನಾವು ಮತ್ತು ಮುಂದಿನ ಪೀಳಿಗೆ ಬದುಕಲು ಸಾಧ್ಯ. ನಾವೆಲ್ಲರೂ ಜಾಗರೂಕರಾಗಬೇಕಿದೆ ಎಂದು ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸಚಿವ ಈಶ್ವರ್ ಖಂಡ್ರೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಅರಣ್ಯ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಬಳ್ಳಾರಿ ಪ್ರಾದೇಶಿಕ ಕಚೇರಿ ವತಿಯಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಂಸ್ಥಾಪನೆಗೊAಡು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ಸರ್ಕಾರಿ(ಮಾ.ಪು) ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಸುವರ್ಣ ಮಹೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತನ್ನೇ ಬಾಧಿಸಿದ ಸಾಂಕ್ರಾಮಿಕ ಕಾಯಿಲೆ ಕೊರೊನಾ ಸಂದರ್ಭದಲ್ಲಿ ಆಮ್ಲಜನಕ ಇಲ್ಲದೇ ಅನೇಕ ಜನರು ಸಾವನ್ನಪ್ಪಿದರು. ಗಿಡ-ಮರಗಳಿಂದ ಮಾತ್ರ ಆಮ್ಲಜನಕ ಉತ್ಪತ್ತಿ ಮಾಡಲು ಸಾಧ್ಯ. ಈಗಾಗಲೇ 11 ಕೋಟಿ ಸಸಿಗಳನ್ನು ರಾಜ್ಯಾದ್ಯಂತ ನೆಡಲಾಗಿದೆ ಎಂದು ಸಚಿವರು ತಿಳಿಸಿದರು.
ಪರಿಸರ ಸಂರಕ್ಷಣೆಗೆ ಕೆಲಸ ಮಾಡಿದವರು ಇಂದಿರಾಗಾಂಧಿ:
ದೇಶದಲ್ಲಿ ಮೊದಲ ಬಾರಿಗೆ ಪರಿಸರ ಸಂರಕ್ಷಣೆಗೆ ಕೆಲಸ ಮಾಡಿದವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ. ಅವರು ದೇಶದಲ್ಲಿ ಮಾತ್ರವಲ್ಲ ಜಗತ್ತಿನಲ್ಲಿ ಮೊದಲ ಬಾರಿಗೆ ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣದ ಬಗ್ಗೆ ಮಾತನಾಡಿದರು. 1972ರಲ್ಲಿ ವಿಶ್ವಸಂಸ್ಥೆಯ ಸ್ಟಾಕ್‌ಹೋಮ್ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಇಂದಿರಾ ಗಾಂಧಿ ಅವರು ಪರಿಸರವನ್ನು ಉಳಿಸಿಕೊಳ್ಳಬೇಕಾದ ಮಹತ್ವವನ್ನು ಜಗತ್ತಿಗೆ ತಿಳಿಸಿಕೊಟ್ಟರು. ನಂತರ 1974ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧೀನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪಿಸಿದರು. ಈಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 50 ವರ್ಷ ಪೂರೈಸಿದ್ದು ಇದೀಗ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಶೇ.33 ರಷ್ಟು ಅರಣ್ಯ ಪ್ರದೇಶ ಹೆಚ್ಚಳಕ್ಕೆ ಆದ್ಯತೆ:
ರಾಜ್ಯದಲ್ಲಿ 43 ಸಾವಿರ ಚ.ಕಿ.ಮೀ (ಸುಮಾರು 1 ಕೋಟಿ ಎಕರೆ) ಪ್ರದೇಶ ಅಂದರೆ ರಾಜ್ಯದ ಸುಮಾರು ಶೇ.21 ರಷ್ಟು ಅರಣ್ಯ ಪ್ರದೇಶವಿದೆ. ಜಾಗತಿಕ ತಜ್ಞರ ಪ್ರಕಾರ ಭೂಭಾಗದ ಶೇ.33 ರಷ್ಟು ಅರಣ್ಯ ಪ್ರದೇಶ ಒಳಗೊಂಡಿರಬೇಕು. ಪ್ರಕೃತಿ ಪರಿಸರ ಆರೋಗ್ಯವಾಗಿರಬೇಕೆಂದರೆ ಶೇ.33 ರಷ್ಟು ಅರಣ್ಯ ಪ್ರದೇಶ ಇರಬೇಕು. ಅರಣ್ಯ ಹೆಚ್ಚಳಕ್ಕೆ ಆದ್ಯತೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಪ್ರಕೃತಿ ಪರಿಸರಕ್ಕೆ ವನ್ಯಜೀವಿ ಅವಶ್ಯಕ:
ರಾಜ್ಯದಲ್ಲಿ 5 ರಾಷ್ಟ್ರೀಯ ಉದ್ಯಾನವನ, 5 ಹುಲಿ ಸಂರಕ್ಷಿತ ಪ್ರದೇಶ, 37 ವನ್ಯಜೀವಿ ಧಾಮ, 19 ವನ್ಯ ಜೀವಿ ಮೀಸಲು ಕ್ಷೇತ್ರಗಳಿವೆ. ದೇಶದಲ್ಲಿ ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಒಟ್ಟು 6,395 ಆನೆಗಳಿವೆ. 563 ಹುಲಿಗಳಿದ್ದು, ದೇಶದಲ್ಲಿಯೇ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದೆ. ಪ್ರಕೃತಿ ಪರಿಸರವನ್ನು ವನ್ಯಜೀವಿಗಳು ಸಮತೋಲನ ಮಾಡುತ್ತಿವೆ. ಹಾಗಾಗಿ ವನ್ಯಜೀವಿಗಳು ಅವಶ್ಯಕವಾಗಿವೆ ಎಂದರು.
ರಾಜ್ಯದಲ್ಲಿ ಜಲ, ವಾಯು, ಶಬ್ದ ಮಾಲಿನ್ಯ ಹೆಚ್ಚುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ, ಪರಿಸರ ಸಂರಕ್ಷಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಜಲ ಮತ್ತು ವಾಯು ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುವುದು. ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ, ಬಹುಮಹಡಿ ಕಟ್ಟಡಗಳ ಸಂಸ್ಕರಿಸದ ಮಲತ್ಯಾಜ್ಯ ಕೆರೆ, ಕಟ್ಟೆ, ನದಿ, ಸರೋವರ ಸೇರುತ್ತಿದ್ದು, ಇದರಿಂದ ಜಲಚರಗಳಷ್ಟೇ ಅಲ್ಲದೆ ಜನ, ಜಾನುವಾರುಗಳೂ ಮೃತಪಡುತ್ತಿರುವುದು ಆತಂಕದ ವಿಷಯವಾಗಿದ್ದು, ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳು ನಿಯಮಿತವಾಗಿ ಕುಡಿಯುವ ನೀರು ಪೂರೈಸುವ ಜಲ ಮೂಲಗಳಲ್ಲಿ ನೀರಿನ ಗುಣಮಟ್ಟ ಮತ್ತು ಜಲ ಶುದ್ಧೀಕರಣ ಘಟಕಗಳ ಕಾರ್ಯಕ್ಷಮತೆಯ ಪರೀಕ್ಷೆ ನಡೆಸಬೇಕು. ಗಣಿಗಾರಿಕೆ ವಾಹನಗಳಿಂದ ಆಗುವ ಧೂಳಿನಿಂದ ಜನರಿಗೆ ಶ್ವಾಸಕೋಶದ ರೋಗಗಳು ಕಾಣಿಸಿಕೊಳ್ಳುತ್ತದೆ. ನಿಯಮಗಳ ಸಮರ್ಪಕ ಪರಿಪಾಲನೆ ಆದರೆ, ಧೂಳಿ ಕಡಿಮೆಯಾಗಿ, ರೋಗಗಳು ಕಡಿಮೆಯಾಗುತ್ತದೆ. ಹೀಗಾಗಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಹೇಳಿದರು.
ಏಕಬಳಕೆ ಪ್ಲಾಸ್ಟಿಕ್ ತ್ಯಜಿಸಲು ಮನವಿ:
ಮಣ್ಣಲ್ಲಿ ಮಣ್ಣಾಗದ, ನೀರಲ್ಲಿ ಕರಗದ, ಸುಟ್ಟರೆ ವಿಷಕಾರಿ ಅಂಶವನ್ನು ಗಾಳಿಗೆ ಸೇರಿಸುವ ಏಕ ಬಳಕೆ ಪ್ಲಾಸ್ಟಿಕ್ ಈ ಭೂಗ್ರಹಕ್ಕೆ ಮಾರಕವಾಗಿದ್ದು, ಪ್ರಜ್ಞಾವಂತ ನಾಗರಿಕರು, ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನ ತ್ಯಜಿಸಬೇಕು, ಸಂತೆ, ಮಾರುಕಟ್ಟೆಗೆ ಹೋಗುವಾಗ ಬಟ್ಟೆಯ ಕೈಚೀಲ ತೆಗೆದುಕೊಂಡು ಹೋಗಬೇಕು ಎಂದು ಮನವಿ ಮಾಡಿದರು.
ಬಳ್ಳಾರಿ ಖನಿಜ ಸಂಪತ್ತಿನಿAದ ಕೂಡಿದ ಪ್ರದೇಶವಾಗಿದ್ದು, ಇಲ್ಲಿ ಪರಿಸರ ಸಂರಕ್ಷಣೆಗೆ ಕೆ.ಎಂ.ಇ.ಆರ್.ಸಿ. ಹಾಗೂ ಡಿಎಂಎಫ್ ನಿಧಿ ಲಭಿಸುತ್ತದೆ. ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಯೋಜನೆ ರೂಪಿಸಿ ಪ್ರಕೃತಿ ಪರಿಸರ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಗಣಿಗಾರಿಕೆ ಹಾಗು ಕೈಗಾರಿಕೆಗಳಿಂದ ಹಾಳಾಗುತ್ತಿರುವ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಬಳ್ಳಾರಿ ಜಿಲ್ಲೆಯು ಮಾಲಿನ್ಯ ಮುಕ್ತವಾಗುವತ್ತ ಹೆಜ್ಜೆ ಇಡಲಿದೆ ಎಂದು ಹೇಳಿದರು.
ಪರಿಸರ ಸ್ನೇಹಿ ಹಬ್ಬ ಆಚರಿಸಿ:
ಬರುವ ದೀಪಾವಾಳಿ ಹಬ್ಬದ ವೇಳೆ ವಾಯು ಮತ್ತು ಶಬ್ಧ ಮಾಲಿನ್ಯ ತಡೆಗಟ್ಟಲು ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಬಳಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರು ಪರಿಸರ ಸ್ನೇಹಿ ಹಬ್ಬ ಆಚರಿಸಬೇಕು ಎಂದು ಹೇಳಿದರು.
ರೀಲ್ಸ್ ಮಾಡಿ ಬಹುಮಾನ ಗೆಲ್ಲಿ:
ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಯುವಕರಿಗೆ ‘ಪರಿಸರದ ಬಗ್ಗೆ ರಿಲ್ಸ್ ಮಾಡಿ ಬಹುಮಾನ ಗೆಲ್ಲಿ’ ಎಂಬ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಪರಿಸರ ಕಾಳಜಿ, ಸಂರಕ್ಷಣೆಯ ಸಂದೇಶ ಸಾರುವ ಉತ್ತಮ ರಿಲ್ಸ್ ಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಬಳ್ಳಾರಿ ಸಂಸದ ಈ.ತುಕಾರಾಮ್ ಅವರು ಮಾತನಾಡಿ, ಗಣಿನಾಡು ಎಂದೇ ಹೆಸರಾಗಿರುವ ಬಳ್ಳಾರಿಯಲ್ಲಿ ಗಣಿಗಾರಿಕೆಯ ಕಾರಣಕ್ಕೆ ದೊಡ್ಡ ಮಟ್ಟದ ಪರಿಸರ ಹಾನಿಯಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ. ನಮಗೆ ಸಿಕ್ಕಿರುವ ನೈಸರ್ಗಿಕ ಸಂಪತ್ತನ್ನು ನಮ್ಮ ಮುಂದಿನ ತಲೆಮಾರಿಗೂ ತಲುಪಿಸುವ ಕೆಲಸ ಆಗಬೇಕು. ಪ್ರತಿಯೊಬ್ಬ ನಾಗರಿಕನೂ ಪರಿಸರ ಉಳಿಸುವ ಜವಾಬ್ದಾರಿ ಹೊರುವಂತಾಗಬೇಕು. ಜಿಲ್ಲೆಯಲ್ಲಿನ ಖನಿಜ, ಗಣಿ, ಸಸ್ಯಪ್ರಭೇದ, ವನ್ಯಜೀವಿಗಳು ಹಾಗೂ ಪರಿಸರದ ಮೇಲಿನ ಹಾನಿಯ ಕುರಿತಾಗಿ ವೈಜ್ಞಾನಿಕ ಅಧ್ಯಯನ ನಡೆಸಬೇಕು ಎಂದು ಹೇಳಿದರು.
ಸಂಡೂರು ಶಾಸಕರಾದ ಈ.ಅನ್ನಪೂರ್ಣ ಅವರು ಮಾತನಾಡಿದರು.
ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ’:
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದಲ್ಲಿ ಪರಿಸರ ಉಳಿವಿಗಾಗಿ ಹಾಗು ಮಾಲಿನ್ಯ ನಿಯಂತ್ರಣಕ್ಕಾಗಿ ಎಲೆ ಮರೆಯ ಕಾಯಿಗಳಂತೆ ಕೆಲಸ ಮಾಡಿರುವ ಮಹನೀಯರಿಗೆ ಮತ್ತು ಸಂಘ ಸಂಸ್ಥೆಗಳಿಗೆ ‘ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ’ನೀಡಿ ಗೌರವಿಸಲಾಯಿತು.
ಸನ್ಮಾನಿತರ ಪಟ್ಟಿ: ಶ್ರೀಶೈಲ ಆಲದಹಳ್ಳಿ(ಸಂಡೂರು), ಡಾ.ಜಿ.ಮನೋಹರ(ಬಳ್ಳಾರಿ), ಕುಂದಾ ಆಮರೇಶ(ರಾಯಚೂರು), ಅಮರೇಶಗೌಡ(ರಾಯಚೂರು), ಸಲಾವುದ್ದೀನ್(ರಾಯಚೂರು).
ಇದೇ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಕುರಿತು ವಿವಿಧ ಶಾಲಾ-ಕಾಲೇಜುಗಳಲ್ಲಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ, ಗೋಡೆಬಹರ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಭಾರತದ ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಉಪಮೇಯರ್ ಡಿ.ಸುಕುಂ, ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಎಸ್.ಎಸ್.ಲಿಂಗರಾಜ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರಿಸ್ ಸುಮೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಬಳ್ಳಾರಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜ, ಉಪವಿಭಾಗಾಧಿಕಾರಿ ಪಿ.ಪ್ರಮೋದ್, ಮಹಾನಗರ ಪಾಲಿಕೆಯ ಆಯುಕ್ತ ಪಿ.ಎಸ್.ಮಂಜುನಾಥ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಳ್ಳಾರಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಟಿ.ಎಂ.ಸಿದ್ದೇಶ್ವರ ಬಾಬು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಪಾಲಿಕೆ ಸದಸ್ಯರು, ಜಿಲ್ಲೆಯ ವಿವಿಧ ಕೈಗಾರಿಕೆಗಳ ಕೈಗಾರಿಕೋದ್ಯಮಿಗಳು, ಕಾರ್ಮಿಕರು, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.