ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್, ತನಗೆ ಜೈಲಿನಲ್ಲಿ ಯಾವುದೇ ಸವಲತ್ತು ನೀಡಿಲ್ಲ. ಕೋರ್ಟ್ ಆದೇಶ ನೀಡಿದ್ದರೂ ಜೈಲಧಿಕಾರಿಗಳು ಸೌಲಭ್ಯ ನೀಡುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಅಂಗೀಕರಿಸಿದೆ.
ನಟ ದರ್ಶನ್ ಈ ಹಿಂದೆ ಜೈಲಿನಲ್ಲಿ ತನಗೆ ಹಾಸಿಗೆ, ತಲೆ ದಿಂಬು ಸೇರಿದಂತೆ ಕೆಲ ಸೌಲಭ್ಯ ನೀಡುವಂತೆ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಕೂಡ ದರ್ಶನ್ ಗೆ ಕೆಲ ಸವಲತ್ತು ನೀಡುವಂತೆ ಜೈಲಧಿಕಾರಿಗಳಿಗೆ ಸೂಚನೆ ನೀಡಿತ್ತು. ಆದರೂ ದರ್ಶನ್ ಗೆ ಯಾವುದೇ ಸವಲತ್ತನ್ನು ಜೈಲಿನಲ್ಲಿ ನೀಡಲಾಗಿಲ್ಲ ಎನ್ನಲಾಗಿದೆ. ಕೋರ್ಟ್ ಆದೇಶ ನೀಡಿದರೂ ದರ್ಶನ್ ಗೆ ಜೈಲಿನಲ್ಲಿ ಯಾವುದೇ ಸವಲತ್ತು ನೀಡದ್ದನ್ನು ಪ್ರಶ್ನಿಸಿ ದರ್ಶನ್ ಪರ ವಕೀಲರು ಮತ್ತೆ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಖುದ್ದು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದರು.
ದರ್ಶನ್ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್, ಅರ್ಜಿಯನ್ನು ಭಾಗಶಃ ಅಂಗೀಕರಿಸಿದೆ. ಅಲ್ಲದೇ ಖುದ್ದು ಜೈಲಿಗೆ ತೆರಳಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ದರ್ಶನ್ ಗೆ ಜೈಲಿನಲ್ಲಿ ಸವಲತ್ತು ನೀಡಲಾಗಿದೆಯೇ ಇಲ್ಲವೇ? ಕೋರ್ಟ್ ಆದೇಶ ಪಾಲಿಸಲಾಗಿದೆಯೇ ಎಂಬ ಬಗ್ಗೆ ಅಕ್ಟೋಬರ್ 18ರೊಳಗೆ ಜೈಲಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಕಾನೂನು ಪ್ರಾಧಿಕಾರಗಳ ಸದಸ್ಯ ಕಾರ್ಯದರ್ಶಿಗೆ ಕೋರ್ಟ್ ಆದೇಶ ನೀಡಿದೆ.