ಗಾಜಾ: ಬುಧವಾರ ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಗಾಜಾದಲ್ಲಿ ಕನಿಷ್ಠ 30 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ಯಾಲೆಸ್ಟೀನಿಯನ್ ಆರೋಗ್ಯ ಅಧಿಕಾರಿ ಹೇಳಿದ್ದಾರೆ.
ಉತ್ತರ ಗಾಜಾದ ಅಲ್-ಸಬ್ರಾ ನೆರೆಹೊರೆಯಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 40 ಕ್ಕೂ ಹೆಚ್ಚು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಆರು ಜನ ಸಾವನ್ನಪ್ಪಿದ್ದಾರೆ.
ಬುಧವಾರ ಸಂಜೆಯಿಂದ ಒಟ್ಟು 30 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಲ್-ಶಿಫಾ ಆಸ್ಪತ್ರೆಯ ನಿರ್ದೇಶಕ ಡಾ. ಮೊಹಮ್ಮದ್ ಅಬು ಸಲ್ಮಿಯಾ ತಿಳಿಸಿದ್ದಾರೆ.
ಆದಾಗ್ಯೂ, ಇಸ್ರೇಲಿ ರಕ್ಷಣಾ ಪಡೆಗಳು(ಐಡಿಎಫ್) ದಾಳಿಯನ್ನು ಸಮರ್ಥಿಸಿಕೊಂಡಿದ್ದು, ಅದು “ಹಮಾಸ್ ಭಯೋತ್ಪಾದಕ ಕೋಶವನ್ನು ಹೊಡೆದುರುಳಿಸಿದೆ” ಎಂದು ಹೇಳಿದೆ.
ಇಸ್ರೇಲ್-ಹಮಾಸ್ ಶಾಂತಿ ಒಪ್ಪಂದ ಮತ್ತು ಟ್ರಂಪ್ ಅವರ ಮಧ್ಯಪ್ರಾಚ್ಯ ಭೇಟಿ
ಈ ಹಿಂದೆ, ಇಸ್ರೇಲ್ ಮತ್ತು ಹಮಾಸ್ ಗಾಜಾದಲ್ಲಿ ಎರಡು ವರ್ಷಗಳಷ್ಟು ಹಳೆಯದಾದ ಯುದ್ಧವನ್ನು ಕೊನೆಗೊಳಿಸಲು ಕದನ ವಿರಾಮಕ್ಕೆ ಒಪ್ಪಿಕೊಂಡವು. ಒಪ್ಪಂದದ ಭಾಗವಾಗಿ, ಹಮಾಸ್ ಕದನ ವಿರಾಮದ 72 ಗಂಟೆಗಳ ಒಳಗೆ 20 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತದೆ. ಅದೇ ರೀತಿ, ಇಸ್ರೇಲ್ ತನ್ನ ಜೈಲಿನಲ್ಲಿರುವ ಪ್ಯಾಲೆಸ್ಟಿನಿಯನ್ ಕೈದಿಗಳನ್ನು ಬಿಡುಗಡೆ ಮಾಡುತ್ತದೆ.
ಶಾಂತಿ ಒಪ್ಪಂದಕ್ಕೆ ಮಧ್ಯವರ್ತಿಯಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ವಾರದ ಕೊನೆಯಲ್ಲಿ ಅಥವಾ ಮುಂದಿನ ವಾರದ ಆರಂಭದಲ್ಲಿ ಮಧ್ಯಪ್ರಾಚ್ಯಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ.