ಹಾಸನ : ಐತಿಹಾಸಿಕ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಇಂದು ಓಪನ್ ಆಗಿದೆ. ಬಾಗಿಲು ತೆರೆಯುತ್ತಿದ್ದಂತೆ ಹಾಸನಾಂಬೆ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರಗಳು ಆರಂಭವಾಗಿದೆ.ಈ ವೇಳೆ ಸಚಿವ ಕೃಷ್ಣಭೈರೇಗೌಡ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಸಂಸದ ಶ್ರೇಯಸ್ ಪಟೇಲ್ ಮತ್ತಿತರರಿದ್ದರು.
ಆಶ್ವೀಜ ಮಾಸದ ಮೊದಲ ಗುರುವಾರ ಅರಸು ವಂಶಸ್ಥರು ಗೊನೆಯುಳ್ಳ ಬಾಳೆ ಕಂಬ ಕಡಿದ ನಂತರ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಾಗಿದೆ.
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಿಯ ದರ್ಶನಕ್ಕಾಗಿ ರಾಜ್ಯ ಮಾತ್ರವಲ್ಲದೆ, ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಬರುತ್ತಾರೆ. ನಾಳೆಯಿಂದ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ಕೃಷ್ಣಪ್ಪ ನಾಯಕನ ಕಾಲದಿಂದಲೂ ಆಶ್ವೀಜ ಮಾಸ ಪೌರ್ಣಮಿಯ ನಂತರ ಬರುವ ಗುರುವಾರದಂದು ಹಾಸನಾಂಬೆಯ ದೇವಾಲಯ ತೆರೆಯಲ್ಪಡುತ್ತದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಅಂದು ದರ್ಶನಾಕಾಂಕ್ಷಿಗಳಾಗಿ ಬಂದು ದೇವಿಯ ದರ್ಶನ ಪಡೆಯುತ್ತಾರೆ.
ಹೀಗೆ ವರ್ಷಕ್ಕೊಮ್ಮೆ ದೇಗುಲದ ಬಾಗಿಲ ಪುರ ಪ್ರಮುಖರಾದ ತಹಸಿಲ್ದಾರರು/ ಕಮೀಷನರ್ ಶಾಸಕರು ಮುಂತಾದವರ ಸಮ್ಮುಖದಲ್ಲಿ ತೆರೆಯಲಾಗುತ್ತದೆಯಲ್ಲದೇ, ಬಲಿಪಾಡ್ಯಮಿಯ ಮಾರನೇ ದಿನ ಬಾಗಿಲು ಅವರೆಲ್ಲರ ಸಮ್ಮುಖದಲ್ಲಿ ದೇವಿಗೆ ದೀಪ, ಅಕ್ಕಿ ನೈವಿದ್ಯಾದಿ ಅಲಂಕಾರಗಳು ಇರುವಂತೆಯೇ ಮುಚ್ಚಲಾಗುತ್ತದೆ.
ಮಧ್ಯಾಹ್ನ 12 ಗಂಟೆಗೆ ಶ್ರೀ ಹಾಸನಾಂಬ ದೇವಿಯ ದೇವಾಲಯದ ಬಾಗಿಲನ್ನು ತೆರೆಯಲಾಗಿದ್ದು,. ಅ.23 ರಂದು ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ. ಭಕ್ತರಿಗೆ ಅ.10 ರಿಂದ ಅ.23 ರವರೆಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಅ.10 ರಿಂದ ಅ.17 ರವರೆಗೆ ಬೆ.10 ರಿಂದ ಮ.01 ಗಂಟೆಯವರೆಗೆ ಮಾತ್ರ ಶಿಷ್ಟಾಚಾರ ದರ್ಶನಕ್ಕೆ ಅವಕಾಶವಿರುತ್ತದೆ. ಅ.18 ರಿಂದ ಅ.22 ರವರೆಗೆ ಯಾವುದೇ ರೀತಿಯ ಶಿಷ್ಟಾಚಾರ ದರ್ಶನಕ್ಕೆ ಅವಕಾಶ ಇರುವುದಿಲ್ಲ.