ಕಾರವಾರ: ಮೇಲಧಿಕಾರಿಯ ಕಿರುಕುಳಕ್ಕೆ ನೊಂದ ಕಂದಾಯ ನಿರೀಕ್ಷಕ ನಾಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.
ಕುಮಟಾ ಪುರಸಭೆಯಲ್ಲಿ ಕಂದಾಯ ನಿರೀಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಯುವ ಅಧಿಕಾರಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಮುಖ್ಯ ಅಧಿಕಾರಿಯ ನಿರಂತರ ಕಿರುಕುಳಕ್ಕೆ ಬೇಸತ್ತು ನಾಪತ್ತೆಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಭಟ್ಕಳ ತಾಲೂಕಿನ ಕೋಟೇಶ್ವರ ಮೂಲದ ವೆಂಕಟೇಶ್ ರಮೇಶ್ (25) ನಾಪತ್ತೆಯಾಗಿರುವ ಆರ್ ಒ. ಕುಮಟಾ ಪುರಸಭೆ ಮುಖ್ಯ ಅಧಿಕಾರಿ ಎಂ. ಆರ್.ಸ್ವಾಮಿ ವೆಂಕಟೇಶ್ ಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ವೆಂಕಟೇಶ್ ತಾಯಿ ಆಶಾ ಭಟಕಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಿಒ ಸ್ವಾಮಿ ಒತ್ತಡ, ಅವಮಾನಕ್ಕೆ ಬೇಸತ್ತು ವೆಂಕಟೇಶ್ ಯಾರಿಗೂ ಹೇಳದೇ ಕೇಳದೇ ಮನೆ ಬಿಟ್ಟು ಹೋಗಿದ್ದು, ಈವರೆಗೆ ಮನೆಗೆ ವಾಪಸ್ ಆಗಿಲ್ಲ. ವೆಂಕಟೇಶ್ ಬರೆದಿರುವ ಪತ್ರ ಲಭ್ಯವಾಗಿದ್ದು, ತಾನು ಅಧಿಕಾರಿಯಿಂದ ಅನುಭವಿಸಿರುವ ಕಿರುಕುಳದ ಬಗ್ಗೆ ಬರೆದಿಟ್ಟಿದ್ದಾರೆ ಎನ್ನಲಾಗಿದೆ. ಮಗನನ್ನು ಹುಡುಕಿಕೊಡುವಂತೆ ತಾಯಿ ಅಳಲು ತೋಡಿಕೊಂಡಿದ್ದಾರೆ.
ಇನ್ನು ಮುಖ್ಯ ಅಧಿಕಾರಿ ಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪುರಸಭೆ ನೌಕರರು ಪಟ್ಟು ಹಿಡಿದಿದ್ದಾರೆ. ಅಲ್ಲದೇ ಅಧಿಕಾರಿ ಹಲವು ಅಕ್ರಮಗಳಲ್ಲಿಯೂ ಭಾಗಿಯಾಗಿದ್ದಾಗಿ ದೂರಿದ್ದಾರೆ.