ಬೆಂಗಳೂರು: ಪರಿಸರ ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಬಿಗ್ ಬಾಸ್ ಸೀಜನ್-12 ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಅಧಿಕಾರಿಗಳು ಬೀಗ ಜಡಿದಿದ್ದರು. ಎರಡು ದಿನಗಳ ಕಾಲ ಬಿಗ್ ಬಾಸ್ ಹೌಸ್ ಹಾಗೂ ಶೋ ಕೂಡ ಬಂದ್ ಆಗಿತ್ತು. ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ಹಾಗೂ ಪರಿಸರ ನಿಯಮಗಳನ್ನು ಪಾಲನೆ ಮಾಡುವುದಾಗಿ ಜಾಲಿವುಡ್ ಸ್ಟುಡಿಯೋ ಅಧಿಕಾರಿಗಳಿಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಜಾಲಿವುಡ್ ಸ್ಟುಡಿಯೋ ಬೀಗ ತೆಗೆಯಲಾಗಿದೆ. ಇದರಿಂದ ಇಂದಿನಿಂದ ಮತ್ತೆ ಬಿಗ್ ಬಾಸ್ ಕಾರ್ಯಕ್ರಮದ ಶೂಟಿಂಗ್ ಕೂಡ ಪುನರಾರಂಭವಾಗಿದೆ.
ಈ ಬೆಳವಣಿಗೆ ಬೆನ್ನಲ್ಲೇ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ರಾಮನಗರದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋ ಗೇಟ್ ಬಳಿ ಜಮಾವಣೆಗೊಂಡಿರುವ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.
ಜಾಲಿವುಡ್ ಸ್ಟುಡಿಯೋ ಗೇಟ್ ಓಪನ್ ಆಗುತ್ತಿದ್ದಂತೆ ಬಿಗ್ ಬಾಸ್ ಮನೆಯನ್ನೂ ತೆರೆಯಲಾಗಿದ್ದು, ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಆಗಮಿಸಿ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸಿದ್ದಾರೆ. ಇದೇ ವೇಳೆ ಜಾಲಿವುಡ್ ಸ್ಟುಡಿಯೋ ಗೇಟ್ ಬಳಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ತೀವ್ರಗೊಳಿಸಿವೆ. ಬಿಗ್ ಬಾಸ್ ಶೋಗೆ ರಾತ್ರೋರಾತ್ರಿ ಹೇಗೆ ಅನುಮತಿ ನೀಡೀದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅಕ್ರಮವಾಗಿ ಅನುಮತಿ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.