ಚಿತ್ರದುರ್ಗ: ಹೈಕೋರ್ಟ್ ಆದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಗೆ ಹೈಕೋರ್ಟ್ 2 ಲಕ್ಷ ರೂಪಾಯಿ ದಂಡ ವಿಧಿಸಿದೆ.
ರಾಜ್ಯ ಲೀಗಲ್ ಸರ್ವಿಸ್ ಅಥಾರಿಟಿಗೆ ಒಂದು ಲಕ್ಷ ರೂಪಾಯಿ, ಪೊಲೀಸ್ ಕ್ಷೇಮಾಭಿವೃದ್ಧಿ ನಿಧಿಗೆ ಒಂದು ಲಕ್ಷ ರೂಪಾಯಿ ನೀಡಲು ಹೈಕೋರ್ಟ್ ಬುಧವಾರ ಆದೇಶ ಹೊರಡಿಸಿದೆ.
ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ಹಿಂದೂ ಮಹಾಗಣಪತಿ ಶೋಭಾ ಯಾತ್ರೆಯಲ್ಲಿ ಜಿಲ್ಲೆಗೆ ಪ್ರವೇಶಿಸದಂತೆ ಶರಣ್ ಪಂಪ್ವೆಲ್ ಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದು, ಇದನ್ನು ಪ್ರಶ್ನಿಸಿ ಶರಣ್ ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ಕೆಲವು ಷರತ್ತು ವಿಧಿಸಿದ ಹೈಕೋರ್ಟ್ ಜಿಲ್ಲಾಡಳಿತದ ನಿರ್ಬಂಧ ತೆರವುಗೊಳಿಸಿತ್ತು.
ಶೋಭಾ ಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿತ್ತು. ಭಾಷಣ ಮಾಡದಂತೆ ತಾಕೀತು ಮಾಡಲಾಗಿತ್ತು. ಆದರೆ, ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ್ದ ಶರಣ್ ಭಾಷಣ ಮಾಡಿದ್ದರು. ಆದೇಶ ಉಲ್ಲಂಘನೆಯ ಬಗ್ಗೆ ಪೊಲೀಸರು ಹೈಕೋರ್ಟ್ ಗಮನಕ್ಕೆ ತಂದಿದ್ದು, ಇದನ್ನು ಪರಿಗಣಿಸಿದ ಹೈಕೋರ್ಟ್ 2 ಲಕ್ಷ ರೂಪಾಯಿ ದಂಡ ವಿಧಿಸಿದೆ.