ಬೆಂಗಳೂರು : ನಾಯಕ ಸಮುದಾಯದ ಶಾಸಕರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಇಂದು ಶಾಸಕರ ಭವನದ ಮುಂಭಾಗವಿರುವ ವಾಲ್ಮೀಕಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮಾತನಾಡಿದರು.
ನಾಡಿನ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು. ವಾಲ್ಮೀಕಿ ಜಯಂತೋತ್ಸವದ ಮೂಲಕ ಅವರನ್ನು ಸ್ಮರಿಸಿದ್ದೇವೆ. ದೇಶ ಕಂಡ ಅಪರೂಪದ ಸಾಹಿತಿ. ರಾಮಾಯಣದಂತಹ ಮಹಾನ್ ಗ್ರಂಥದ ಕತೃ. ವಾಲ್ಮೀಕಿಯವರು ಶೂದ್ರ ಜನಾಂಗದಲ್ಲಿ ಜನಿಸಿದ್ದರೂ ರಾಮಾಯಣದಂತಹ ಶ್ರೇಷ್ಠ ಗ್ರಂಥವನ್ನು ವಿಶ್ವಕ್ಕೆ ಪರಿಚಯಿಸಿದರು. ವಾಲ್ಮೀಕಿಯವರ ಪ್ರತಿಮೆಯನ್ನು 2017ರಲ್ಲಿ ಸ್ಥಾಪಿಸಲಾಯಿತು. ವಾಲ್ಮೀಕಿ ಹಾಗೂ ಕನಕದಾಸರಂತಹ ಮಹಾನ್ ಸಂತರು ಸಮಾಜಮುಖಿಯಾಗಿ ಬದುಕಿದವರು. ಅವರು ಬೋಧಿಸಿದಂತೆಯೇ ಮಾನವೀಯ ಮೌಲ್ಯಗಳನ್ನು ಅನುಸರಿಸಿ, ಬಾಳಿದವರು. ಮುಂದಿನ ದಿನಗಳಲ್ಲಿ ಸಚಿವ ಸಂಪುಟ ಪುನರ್ ರಚನೆ ನಡೆಯುವ ಸಂದರ್ಭದಲ್ಲಿ ನಾಯಕ ಸಮುದಾಯದ ಶಾಸಕರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಬಗ್ಗೆ ಪರಿಗಣಿಸಲಾಗುವುದು. ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದಿರುವುದನ್ನು ಸ್ವತಃ ಮುಖ್ಯ ನ್ಯಾಯಮೂರ್ತಿಯವರೇ ಕ್ಷಮಿಸಿದ್ದಾರೆ. ಇದು ಅವರ ದೊಡ್ಡಗುಣವನ್ನು ಬಿಂಬಿಸುತ್ತದೆ. ಆದರೆ ಇಂತಹ ಕೃತ್ಯವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಇದರಲ್ಲಿ ಮನುವಾದಿಗಳ ಕೈವಾಡವಿದೆ ಎಂದು ಸಿಎಂ ಹೇಳಿದ್ದಾರೆ.