ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ರೌಡಿಶೀಟರ್ ಓರ್ವ ಭರ್ಜರಿ ಬರ್ತ್ ಡೇ ಪಾರ್ಟಿ ಮಾಡಿರುವ ಘಟನೆ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಪ್ರಕರಣ ದಾಖಲಾಗಿದೆ.
ಹೌದು. ಘಟನೆ ಸಂಬಂಧ ರೌಡಿಶೀಟರ್ ಗುಬ್ಬಚ್ಚಿ ಸೀನಾ ಸೇರಿ 11 ಮಂದಿ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
ದರ್ಶನ್ ಪ್ರಕರಣದ ಬಳಿಕ ಜೈಲಿನಲ್ಲಿ ರಾಜಾತಿಥ್ಯಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ರೌಡಿಶೀಟರ್ ಓರ್ವ ಜೈಲಿನಲ್ಲಿಯೇ ಹುಟ್ಟುಹಬ್ಬ ಸಂಭ್ರಮಿಸಿದ್ದು, ಸೇಬಿನ ಹಾರ ಹಾಕಿಕೊಂಡು ಕೇಕ್ ಕಟ್ ಮಾಡಿ ಹುಚ್ಚಾಟ ಮೆರೆದಿರುವುದು ಅಚ್ಚರಿ ಮೂಡಿಸಿದೆ.
ನಟೋರಿಯಸ್ ರೌಡಿ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾ ಜೈಲಿನಲ್ಲಿ ಭರ್ಜರಿಯಾಗಿ ಬರ್ತ್ ಡೇ ಸಲೆಬ್ರೇಷನ್ ಮಾಡಿದ್ದಾನೆ. ಸೇಬಿನ ಹಾರ ಹಾಕಿಕೊಂಡು ಜೈಲಿನ ಬ್ಯಾರಕ್ ನಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾನೆ. ರೌಡಿಶೀಟರ್ ನ ಬರ್ತ್ ಡೇ ಪಾರ್ಟಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು 11 ಮಂದಿ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.