ರಾಮನಗರ: ಮಹಾರಾಷ್ಟ್ರದಲ್ಲಿ ನಕಲಿ ಲೋಕಾಯುಕ್ತ ಅಧಿಕಾರಿಯನ್ನು ಬಂಧಿಸಲಾಗಿದೆ. ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ಜೈ ಸಿಂಗಾಪುರ ಗ್ರಾಮದಲ್ಲಿ ನಕಲಿ ಲೋಕಾಯುಕ್ತ ಅಧಿಕಾರಿಯ ಮುರುಗಪ್ಪ ನಿಂಗಪ್ಪ ಕುಂಬಾರ ಎಂಬುವನನ್ನು ಬಂಧಿಸಲಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ ಐಜೂರು ಠಾಣೆ ಪೋಲೀಸರು ಆರೋಪಿ ಮುರುಗಪ್ಪ ನಿಂಗಪ್ಪ ಕುಂಬಾರನನ್ನು ಬಂಧಿಸಿದ್ದಾರೆ. ಲೋಕಾಯುಕ್ತ ಅಧಿಕಾರಿಯ ಹೆಸರಲ್ಲಿ ಫೋನ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿ ಅಧಿಕಾರಿಗಳಿಗೆ ಫೋನ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ.
ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ 17 ವರ್ಷ ಸೇವೆ ಸಲ್ಲಿಸಿದ ಆರೋಪಿ ಲೋಕಾಯುಕ್ತದಲ್ಲಿಯೂ ಪೊಲೀಸ್ ಆಗಿ ಕೆಲಸ ಮಾಡಿದ್ದ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಂಡಿದ್ದ. ನಂತರ ಲೋಕಾಯುಕ್ತ ಅಧಿಕಾರಿಗಳ ಮಾಹಿತಿ ಪಡೆದು ಅವರ ರೀತಿಯಲ್ಲಿಯೇ ಅಧಿಕಾರಿಗಳಿಗೆ ಬ್ಲಾಕ್ಮೇಲ್ ಮಾಡುತ್ತಿದ್ದ ಆರೋಪಿ ಇತ್ತೀಚೆಗೆ ಮಾಗಡಿಯ ಸಿಡಿಪಿಓ ಸುರೇಂದ್ರ, ಜಿಲ್ಲಾ ಸರ್ಜನ್ ಡಾ. ಮಂಜುನಾಥ್ ಅವರಿಗೆ ಕರೆ ಮಾಡಿದ್ದ. ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಬಂಧಿತ ಆರೋಪಿಯಿಂದ ಮೂರು ಮೊಬೈಲ್, 9ಕ್ಕೂ ಹೆಚ್ಚು ಸಿಮ್ ಕಾರ್ಡ್ ಗಳು ವಶಕ್ಕೆ ಪಡೆಯಲಾಗಿದೆ. ಆರೋಪಿಯ ಮೇಲೆ 15 ಜಿಲ್ಲೆಗಳಲ್ಲಿ 56 ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ. ಸಾಕಷ್ಟು ಬಾರಿ ಜೈಲಿಗೆ ಹೋಗಿ ಬಂದಿದ್ದರೂ ಆರೋಪಿ ಬುದ್ಧಿ ಕಲಿತಿರಲಿಲ್ಲ.