ತುಮಕೂರು: ಖಾಸಗಿ ಬಸ್ ಡಿಕ್ಕಿಯಾಗಿ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಮೂವರು ಸಾವನ್ನಪ್ಪಿದ್ದಾರೆ. ಕಾರ್ ನಲ್ಲಿ ತೆರಳುತ್ತಿದ್ದ ಮೂವರು ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.
ತುಮಕೂರು ತಾಲೂಕಿನ ಬೆಳಧರೆ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ತುಮಕೂರಿನಿಂದ ಪಾವಗಢದ ಕಡೆಗೆ ಖಾಸಗಿ ಬಸ್ ತೆರಳುತ್ತಿತ್ತು. ಕೊರಟಗೆರೆ ಕಡೆಯಿಂದ ಧರ್ಮಸ್ಥಳದ ಕಡೆಗೆ ಕಾರ್ ಸಂಚರಿಸುತ್ತಿತ್ತು,. ನಿಯಂತ್ರಣ ತಪ್ಪಿ ಖಾಸಗಿ ಬಸ್ ಮತ್ತು ಕಾರ್ ಮುಖಾಮುಖಿ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದಾರೆ.
ಕಾರ್ ನಲ್ಲಿ ತೆರಳುತ್ತಿದ್ದ ಬೈಚರಾಪುರ ಗ್ರಾಮದ ಶಿವಶಂಕರ್(30), ಕೊರಟಗೆರೆಯ ಶಿವಕುಮಾರ್(27), ಗೋವಿಂದಪ್ಪ(50) ಮೃತಪಟ್ಟವರು ಎಂದು ಹೇಳಲಾಗಿದೆ. ಗಾಯಾಳು ರೆಡ್ಡಿಹಳ್ಳಿಯ ಶಂಕರ್(28) ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಿತ್ತಿನಾಗೇನಹಳ್ಳಿ ವೇಣುಗೋಪಾಲ್ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ನಂತರ ಸ್ಥಳದಿಂದ ಖಾಸಗಿ ಬಸ್ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.