ಫರೂಕಾಬಾದ್: ಉತ್ತರ ಪ್ರದೇಶದ ಫರೂಕಾಬಾದ್‌ನ ಕೋಚಿಂಗ್ ಸೆಂಟರ್‌ನಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ದಿ ಸನ್ ಕ್ಲಾಸಸ್ ಲೈಬ್ರರಿ ಎಂಬ ಕೋಚಿಂಗ್ ಸೆಂಟರ್ ನ ನೆಲ ಮಹಡಿಯಲ್ಲಿ ಸ್ಫೋಟ ಸಂಭವಿಸಿದ್ದು, ನಂತರ ಮೂರು ಅಗ್ನಿಶಾಮಕ ದಳದ ವಾಹನಗಳು ಮತ್ತು ಆಂಬ್ಯುಲೆನ್ಸ್ ಸ್ಥಳಕ್ಕೆ ಧಾವಿಸಿವೆ. ಗಾಯಗೊಂಡ ಐದು ಜನರನ್ನು ಲೋಹಿಯಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಮತ್ತು ಅವರನ್ನು ಮತ್ತೊಂದು ಆಸ್ಪತ್ರೆಗೆ ಕಳುಹಿಸಲಾಗಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್(ಡಿಎಂ) ಸೇರಿದಂತೆ ಹಿರಿಯ ಅಧಿಕಾರಿಗಳು ಘಟನೆಯ ಬಗ್ಗೆ ಮಾಹಿತಿ ಪಡೆಯಲು ಸ್ಥಳಕ್ಕೆ ಆಗಮಿಸಿದ್ದಾರೆ.
ಸ್ಫೋಟದ ಹಿನ್ನೆಲೆಯಲ್ಲಿ ಆಡಳಿತವು ಹೆಚ್ಚಿನ ಸಂಖ್ಯೆಯ ಪಡೆಯನ್ನು ನಿಯೋಜಿಸಿದೆ. ಸ್ಫೋಟದ ಕಾರಣವನ್ನು ಕಂಡುಹಿಡಿಯಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಉನ್ನತ ಅಧಿಕಾರಿಗಳಿಗೆ ಸ್ಫೋಟದ ಸ್ಥಳಕ್ಕೆ ತಲುಪಲು ನಿರ್ದೇಶಿಸಿದ್ದಾರೆ. ಗಾಯಾಳುಗಳಿಗೆ ತಕ್ಷಣದ ಪರಿಹಾರ ಒದಗಿಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದ್ದಾರೆ.