ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತೊಂದು ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹನೂರು ವಲಯ ಅರಣ್ಯಾಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಹನೂರು ವಲಯದ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪಚ್ಚೆದೊಡ್ಡಿ ತಾಂಡಾ ನಿವಾಸಿಗಳಾದ ಪಚ್ಚೆ ಮಲ್ಲು ಮತ್ತು ಮಂಜುನಾಥ್ ಅವರನ್ನು ಬಂಧಿಸಲಾಗಿದೆ. ಹುಲಿಗೆ ವಿಷಪ್ರಾಶನ ಮಾಡಿ ಕೊಂದಿರುವುದಾಗಿ ವರದಿಯಿಂದ ದೃಢಪಟ್ಟಿದೆ.
ಮಲೆ ಮಹದೇಶ್ವರ ವನ್ಯಧಾಮದ ಹನೂರು ಬಫರ್ ವಲಯ ವ್ಯಾಪ್ತಿಯ ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯನ್ನು ಮೂರು ಭಾಗಗಳಾಗಿ ತುಂಡರಿಸಿ ಹತ್ಯೆ ಮಾಡಲಾಗಿತ್ತು. ಗುರುವಾರ ಸಂಜೆ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ನಡೆಸುವಾಗ ಹುಲಿಯ ತಲೆ, ಮುಂಗಾಲಿನ ಭಾಗ ಕಂಡುಬಂದಿದ್ದು, ಶೋಧ ನಡೆಸಿದ ವೇಳೆ ಉಳಿದ ಭಾಗಗಳು ಪತ್ತೆಯಾಗಿದ್ದವು. ಹುಲಿಯ ಉಗುರು ಮತ್ತು ಹಲ್ಲು, ಚರ್ಮವನ್ನು ಹಾಗೆಯೇ ಬಿಡಲಾಗಿದ್ದು, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಪ್ರಕರಣದ ತನಿಖೆಗೆ ಸೂಚಿಸಿದ್ದರು.