ಬೆಂಗಳೂರು: ಕೆಮ್ಮಿನ ಸಿರಪ್ ನಿಂದಾಗಿ 12 ಮಕ್ಕಳು ಸಾವನ್ನಪ್ಪಿರುವ ಘಟನೆ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಎರಡು ವರ್ಷಗಳೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡದಂತೆ ಸೂಚನೆ ನೀಡಿದೆ.
ಇದರ ಬೆನ್ನಲ್ಲೇ ಕರ್ನಾಟಕದಲ್ಲಿಯೂ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಸಿರಪ್ ಗಳ ಪರಿಶೀಲನೆಗೆ ಮುಂದಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದು, ಕೋಡ್ರಿಫ್ ಸಿರಪ್ ನಿಂದಾಗಿ ಮಧ್ಯಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಮಕ್ಕಳು ಸಾವನ್ನಪ್ಪಿರುವ ವರದಿಯಾಗಿದೆ. ಕರ್ನಾಟಕದಲ್ಲಿ ಈ ಸಿರಪ್ ವಿತರಣೆಯಾಗಿಲ್ಲ. ಆದಾಗ್ಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ತಮಿಳುನಾಡು, ಪುದುಚೆರಿ, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಸಿರಪ್ ಸರಬರಾಜಾಗಿದೆ ಎಂಬ ಮಾಹಿತಿ ಇದೆ. ಕರ್ನಾಟಕದಲ್ಲಿ ಕೋಲ್ಡ್ರಿಫ್ ಸಿರಪ್ ಸರಬರಾಜಾಗಿಲ್ಲ. ಆದರೂ ಮುಂಜಾಗೃತಾ ಕ್ರಮವಾಗಿ ಬೇರೆ ಬ್ರ್ಯಾಂಡ್ ಗಳ ಸಿರಪ್ ಗಳನ್ನು ಪರಿಶೀಲನೆ ನಡೆಸಕಾಗುತ್ತಿದೆ. ವರದಿ ಬಂದ ಬಳಿಕ ಮಾಹಿತಿ ನೀಡಲಾಗುವುದು ಎಂದರು.
ರಾಜ್ಯದ ಜನರು ಆತಂಕಪಡುವ ಅಗತ್ಯವಿಲ್ಲ. ಕರ್ನಾಟಕದಲ್ಲಿ ಕೋಲ್ಡ್ರಿಫ್ ಸಿರಪ್ ವಿತರಣೆಯಾಗಿಲ್ಲ. ಮಾಹಿತಿ ಬಂದ ತಕ್ಷಣ ಡ್ರಗ್ ಕಂಟ್ರೋಲ್ ಜೊತೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.