ಬೆಂಗಳೂರು: ರಾಜ್ಯದಲ್ಲಿ ಇನ್ನೂ ಎರಡು ವಾರ ಮುಂಗಾರು ಮಳೆ ಮುಂದುವರೆಯುವ ಸಾಧ್ಯತೆ ಇದೆ. ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಗುಡುಗು ಸಹಿತ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಕ್ಟೋಬರ್ 4 ರಿಂದ 10 ರವರೆಗೆ ಉತ್ತಮ ಮಳೆಯಾಗಲಿದ್ದು, ಈ ಅವಧಿಯಲ್ಲಿ ಕೆಲವೆಡೆ ಮಳೆಗಿಂತ ಬಿರುಗಾಳಿ ಹೆಚ್ಚಾಗಿರುತ್ತದೆ ಎಂದು ಮುನ್ಸೂಚನೆ ನೀಡಲಾಗಿದೆ. ಮುಂಗಾರು ಮಾರುತಗಳು ಮಧ್ಯಪ್ರದೇಶದಲ್ಲಿ ಸಕ್ರಿಯವಾಗಿವೆ. ಈ ಹಿನ್ನೆಲೆಯಲ್ಲಿ ಅಲ್ಲಿ ಉತ್ತಮ ಮಳೆಯಾಗುತ್ತಿದೆ. ಶುರುವಾದ ಸ್ಥಳದಲ್ಲಿಯೇ ವಾಪಸ್ ಮಾರುತಗಳು ಆಗಮಿಸಿದರೆ ಅದನ್ನು ಮುಂಗಾರು ಮುಕ್ತಾಯವೆಂದು ಘೋಷಿಸಲಾಗುತ್ತದೆ.
ಗುಜರಾತ್. ಒಡಿಶಾ ಸಮುದ್ರ ತೀರದಲ್ಲಿ ಪ್ರಸ್ತುತ ವಾಯುಭಾರ ಕುಸಿತ ಉಂಟಾಗಿದ್ದು, ರಾಜ್ಯದಲ್ಲಿ ಮುಂದಿನ ಎರಡು ವಾರ ಮಳೆ ಆಗಲಿದೆ. ಮುಂಗಾರು ಮುಗಿದ ಬಳಿಕ ಈಶಾನ್ಯ ಮಾನ್ಸೂನ್ ಹಿಂಗಾರು ಮಾರುತ ಸಕ್ರಿಯವಾಗುತ್ತವೆ ಎಂದು ಹೇಳಲಾಗಿದೆ.