ಬೆಂಗಳೂರು: ರಾಜ್ಯದಾದ್ಯಂತ ಮುಂದುವರೆದಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಜಾತಿಗಣತಿ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಇಂದಿನಿಂದ ಆರಂಭವಾಗಲಿದೆ.
17500 ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಸೆಪ್ಟೆಂಬರ್ 22 ರಿಂದ ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲಾಗಿದೆ. 11 ದಿನದ ನಂತರ ಬೆಂಗಳೂರಿನಲ್ಲಿ ಸಮೀಕ್ಷೆ ಆರಂಭವಾಗಲಿದೆ.
5 ನಗರ ಪಾಲಿಕೆಗಳ ಆಯುಕ್ತರ ಮೇಲ್ವಿಚಾರಣೆಯಲ್ಲಿ ಸಮೀಕ್ಷೆ ನಡೆಯಲಿದ್ದು, ಅಪರ ಆಯುಕ್ತರು, ಜಂಟಿ ಆಯುಕ್ತರು, ಉಪ ಆಯುಕ್ತರು ಭಾಗವಹಿಸಲಿದ್ದಾರೆ. ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಒಬ್ಬರಂತೆ ಕೆಎಎಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳೆಂದು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಸಮೀಕ್ಷಾದಾರರಿಗೆ ಗುರುತಿನ ಚೀಟಿ, ಕ್ಯಾಪ್, ಬ್ಯಾಗ್ ಕೈಪಿಡಿ, ಸ್ವಯಂ ಘೋಷಣಾ ಪತ್ರ ಸೇರಿ ಇತರೆ ಸಾಮಗ್ರಿಗಳ ಕಿಟ್ ವಿತರಿಸಲಾಗಿದೆ. ನಾಗರೀಕರು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ಇತರೆ ದಾಖಲೆಗಳನ್ನು ಇಟ್ಟುಕೊಂಡು ಸಮೀಕ್ಷಾದಾರರಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಒಟ್ಟು 50,57,469 ಕುಟುಂಬಗಳ ಸಮೀಕ್ಷೆ ನಡೆಯಲಿದೆ. ಒಬ್ಬ ಸಮೀಕ್ಷಾದಾರರಿಗೆ 300 ಮನೆ ನೀಡಲಾಗಿದೆ.