ಬೆಳಗಾವಿ: ಭೀಕರ ಪ್ರವಾಹ, ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕದ ಭಾಗದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ರೈತರು ಬೆಳೆದ ಬೆಳೆ, ಮನೆ-ಮಠ ಕಳೆದುಕೊಂಡು ಪರದಾಡುತ್ತಿದ್ದಾರೆ. ಕಾಳಜಿ ಕೇಂದ್ರಗಳಲ್ಲಿ ದಿನ ಕಳೆಯುವ ಸ್ಥಿತಿ. ಅನ್ನದಾನ ಇಷ್ಟೆಲ್ಲ ಸಂಕಷ್ಟಕ್ಕೀಡಾಗಿದ್ದರೂ ಸರ್ಕಾರದ ಸಚಿವರು, ಶಾಸಕರು ಈವರೆಗೂ ಬಂದು ಪರಿಶೀಲನೆ ನಡೆಸಿಲ್ಲ. ರೈತರ ಬವಣೆ ಆಲಿಸಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಮಳೆ ಹಾನಿಯಿಂದಾದ ರೌತರ ಜಮೀನು, ಕೃಷಿ ಭೂಮಿಗೆ ಭೇಟಿ ನೀಡಿ ಬಿಜೆಪಿ ನಾಯಕರು ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಆರ್.ಅಶೋಕ್, ರೈತರು ಬೆಳೆದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ. ಕ್ಯಾರೆಟ್, ಸೋಯಾ, ಹೆಸರು ಹೀಗೆ ಬೆಳೆದ ಎಲ್ಲಾ ಬೆಳೆಗಳು ನೀರುಪಾಲಾಗಿವೆ. ಸಂಪೂರ್ಣ ನಾಶವಾಗಿವೆ. ಇಡೀ ರಾಜ್ಯ ನವರಾತ್ರಿ ಹಬ್ಬವನ್ನು ಆಚರಿಸಿದರೆ ಉತ್ತರ ಕರ್ನಾಟಕ ಭಾಗದ ಜನರು, ರೈತರು ಅತಿವೃಷ್ಟಿಯಿಂದಾಗಿ ಮನೆಯಲ್ಲಿಯೂ ವಾಸಮಾಡಲಾಗದೇ ಊರು ತೊರೆಯಬೇಕಾದ ಸ್ಥಿತಿಯಲ್ಲಿದ್ದಾರೆ. ಒಬ್ಬನೇ ಒಬ್ಬ ಸಚಿವ, ಶಾಸಕರು ರೈತರ ಬಳಿ ಬಂದು ಸಮಸ್ಯೆ ಆಲಿಸಿಲ್ಲ. ಈ ಸರ್ಕಾರ ರೈತರ ಪಾಲಿಗೆ ಸತ್ತುಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೆರೆ ಸಂಕಷ್ಟ ಕೇಳಲು ಬಾರದ ಸಿಎಂ ಸಿದ್ದರಾಮಯ್ಯ ಶನಿವಾರ ಬೆಳಗಾವಿಗೆ ಬಿರಿಯಾನಿ ತಿನ್ನಲು ಬರುತ್ತಿದ್ದಾರೆ. ಮಳೆಯಿಂದ ಜಿಲ್ಲೆಯಲ್ಲಿ ಹಾನಿಯಾಗಿದೆ. ಜನ ತೊಂದರೆಗೆ ಸಿಲುಕಿದರೂ ಆಗ ಬಾರದ ಸಿಎಂ ಈಗ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಬರುತ್ತಿದ್ದಾರೆ. ಅಲ್ಲಿಗೆ ಬಂದು ಬಿರಿಯಾನಿ ತಿಂದು ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.