ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ವಾರಾಂತ್ಯದವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗುರುವಾರ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಇನ್ನು ಕೆಲವು ದಿನಗಳವರೆಗೂ ಮಳೆ ಆಗುವ ಸಾಧ್ಯತೆ ಇದೆ. ಮಲೆನಾಡು, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಕ್ಟೋಬರ್ 5ರ ವರೆಗೂ ಮಳೆಯಾಗಲಿದೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶುಕ್ರವಾರ ಮತ್ತು ಶನಿವಾರ ಹೆಚ್ಚಿನ ಮಳೆ ಆಗಲಿದೆ. ವಾರಾಂತ್ಯದ ಬಳಿಕ ಕೆಲವು ದಿನಗಳ ಕಾಲ ಮಳೆ ಕಡಿಮೆಯಾಗಲಿದ್ದು, ಮತ್ತೆ ಮಳೆ ಪುನರಾರಂಭವಾಗಲಿದೆ. ಅಕ್ಟೋಬರ್ ಮಧ್ಯದವರೆಗೂ ಮುಂಗಾರು ವಿಸ್ತರಣೆ ಆಗಿರುವುದರಿಂದ ಕೊನೆ ಹಂತದಲ್ಲಿ ಹೆಚ್ಚಿನ ಮಳೆಯಾಗುವ ಸಂಭವವಿದೆ ಎಂದು ಹೇಳಲಾಗಿದೆ.
ಮುಂದಿನ ಒಂದು ವಾರ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗುವ ಸಂಭವ ಇದ್ದು, ಶುಕ್ರವಾರ ಮತ್ತು ಶನಿವಾರ ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಯಲ್ಲಿ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ವಿಜಯಪುರ ಜಿಲ್ಲೆಯ ಹಲವು ಕಡೆ ಸಾಧಾರಣ ಮಳೆ ಆಗುವ ಸಂಭವ ಇದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವೇಗದ ಗಾಳಿಯೊಂದಿಗೆ ಸಾಧಾರಣ ಮಳೆ ಆಗಲಿದೆ ಎನ್ನಲಾಗಿದೆ.